- June 24, 2022
ಶಿವಣ್ಣನ ಜೊತೆ ಕೈ ಜೋಡಿಸಿದ ‘ಜೀ ಸ್ಟುಡಿಯೋಸ್’


‘ಕರುನಾಡ ಚಕ್ರವರ್ತಿ’ ಡಾ| ಶಿವರಾಜಕುಮಾರ್ ಅವರು ಸದ್ಯ ಕನ್ನಡದ ನಾಯಕನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು. ವಯಸ್ಸಿನ ಜೊತೆಜೊತೆಗೆ ಉತ್ಸಾಹವನ್ನೂ ಹೆಚ್ಚಿಸಿಕೊಳ್ಳುತ್ತಿರುವ ಇವರು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಬ್ಬ ನಾಯಕನಟ 50 ಸಿನಿಮಾಗಳನ್ನು ಪೂರ್ಣಗೊಳಿಸುವುದೇ ಸಾಧನೆಯಾಗಿರುವ ಈ ವೇಗದ ಕಾಲದಲ್ಲಿ, ಶಿವಣ್ಣ ಸದ್ಯ ತಮ್ಮ 125ನೇ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರವೇ ‘ವೇದಾ’. ಶಿವಣ್ಣ ತಮ್ಮ ಸ್ವಂತ ಸಂಸ್ಥೆಯಾದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದ ಈ ಚಿತ್ರಕ್ಕೆ ಇದೀಗ ‘ಜೀ ಸ್ಟುಡಿಯೋಸ್’ ಕೈ ಜೋಡಿಸಿದೆ.


‘ಜೀ ಸ್ಟುಡಿಯೋಸ್’ ಭಾರತದ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಹಿಂದಿ, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಕೀರ್ತಿ ಈ ಸಂಸ್ಥೆಯದ್ದು. ಸದ್ಯ ಈ ‘ಜೀ ಸ್ಟುಡಿಯೋಸ್’ ನಮ್ಮ ಶಿವಣ್ಣನ 125ನೇ ಚಿತ್ರ ‘ವೇದಾ’ಗೆ ಬಂಡವಾಳ ಹೂಡಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ‘ವೇದಾ’ ಸಿನಿಮಾದ ಮೋಶನ್ ಪೋಸ್ಟರ್ ಅನ್ನು ತಮ್ಮ ‘ಜೀ ಸ್ಟುಡಿಯೋಸ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜೂನ್ 22ರಂದು ಸಿನಿಮಾದ ಮೊದಲ ಮೋಶನ್ ಪೋಸ್ಟರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ.


ಈಗಾಗಲೇ ‘ಭಜರಂಗಿ’,’ವಜ್ರಕಾಯ’ ದಂತಹ ಹಿಟ್ ಸಿನಿಮಾಗಳನ್ನು ಶಿವಣ್ಣನವರಿಗೆ ನಿರ್ದೇಶನ ಮಾಡಿರುವ ಎ. ಹರ್ಷ ಅವರೇ ಈ ಸಿನಿಮಾದ ರಚನೆ ಹಾಗು ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನಿಗೆ ಜೊತೆಯಾಗಿ ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ರಘು ಶಿವಮೊಗ್ಗ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ. ಇದು 1960ನೇ ದಶಕದ ಕಾಲಘಟ್ಟದಲ್ಲಿ ರಚಿಸಲಾಗಿರುವ ಕಥೆಯಾಗಿದ್ದು, ಚಿತ್ರದ ಶೀರ್ಷಿಕೆಯ ಅಡಿಯಲ್ಲೂ ‘The Brutal 1960’s’ ಎಂದು ಬರೆಯಲಾಗಿದೆ. ಸಿನಿಮಾಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತವಿರಲಿದೆ.










