- April 27, 2022
‘ಯುವ’ ರಾಜಕುಮಾರನನ್ನ ತರುತ್ತಿದೆ ಹೊಂಬಾಳೆ.


ನಿಮ್ಮ ಅತ್ಯಂತ ನೆಚ್ಚಿನ ಸಿನೆಮಾ ಸಂಸ್ಥೆ ಯಾವುದು ಎಂದು ಯಾರೇ ಕನ್ನಡಿಗನ ಹತ್ತಿರ ಕೇಳಿದರೂ, ಬಹುಪಾಲು ಉತ್ತರ ಹೇಳೋ ಹೆಸರು, ‘ಹೊಂಬಾಳೆ ಫಿಲಂಸ್’. ಕನ್ನಡಕ್ಕೆ, ಅಲ್ಲಲ್ಲ ಪ್ರಪಂಚದ ಸಿನಿರಂಗಕ್ಕೆ ‘ಕೆಜಿಎಫ್’ನಂತಹ ಚಿನ್ನದ ಗಣಿಯನ್ನ ಕೊಟ್ಟಂತ ಕನ್ನಡಿಗರ ಹೆಮ್ಮೆ, ‘ಹೊಂಬಾಳೆ ಫಿಲಂಸ್’. ಇದೀಗ ಹೊಸದೊಂದು ಹೆಜ್ಜೆಯನ್ನ ಈ ದಿಗ್ಗಜ ಸಂಸ್ಥೆ ಇಡುತ್ತಿದೆ.




ರಾಜ್ ಕುಟುಂಬ ಕನ್ನಡಿಗರೆಲ್ಲರ ನೆಚ್ಚಿನ ಸಿನಿಬಳಗ ಎಂದೇ ಹೇಳಬಹುದು. ರಾಜಕುಮಾರ್ ಅವರಿಂದ ಆರಂಭವಾದ ಇವರ ಕಲಾಸೇವೆ ಇದೀಗ 3ನೇ ಪೀಳಿಗೆಯಿಂದ ಮುಂದುವರೆಯುತ್ತಿದೆ. ರಾಜಕುಮಾರ್ ಹಾಗು ಅವರ ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮುಂತಾದವರು ಕನ್ನಡ ಸಿನಿರಂಗಕ್ಕೆ ಕೊಟ್ಟಂತ ಕೊಡುಗೆ ಅಪಾರ. ಸದ್ಯ ಈ ಕಲಾದೋಣಿಯನ್ನ ಮುಂದೂಡಿಕೊಂಡು ಹೋಗಲು ಧನ್ಯ ರಾಮಕುಮಾರ್, ವಿನಯ್ ರಾಜಕುಮಾರ್ ಸಜ್ಜಾಗಿ ನಿಂತಿದ್ದಾರೆ. ಇವರೊಂದಿಗೆ ಇದೀಗ ರಾಘವೇಂದ್ರ ರಾಜಕುಮಾರ್ ಅವರ ಎರಡನೇ ಕುಡಿ, ಯುವ ರಾಜಕುಮಾರ್ ಕೂಡ ಸೇರಿಕೊಳ್ಳಲಿದ್ದಾರೆ. ‘ಹೊಂಬಾಳೆ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಯುವ ರಾಜಕುಮಾರ್ ಚಿತ್ರರಂಗದ ಮೆಟ್ಟಿಲನ್ನ ಏರಲಿದ್ದಾರೆ.




ಏಪ್ರಿಲ್ 27, ಬೆಳಿಗ್ಗೆ 9:50ಕ್ಕೆ ಅಧಿಕೃತವಾಗಿ ಹೊಸ ಘೋಷಣೆಯೊಂದನ್ನು ಮಾಡುವುದಾಗಿ ‘ಹೊಂಬಾಳೆ ಫಿಲಂಸ್’ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಅದರಂತೆ ಇಂದು(ಏಪ್ರಿಲ್ 27) ಯುವ ರಾಜಕುಮಾರ್ ಅವರನ್ನು ತಮ್ಮ ಸಂಸ್ಥೆಯ ಮೂಲಕ ಲಾಂಚ್ ಮಾಡುವುದಾಗಿ ಸಂತಸದಿಂದ ಹೇಳಿಕೊಂಡಿದ್ದಾರೆ. ರಾಜ್ ಕುಟುಂಬಕ್ಕೂ ಅವರಿಗೂ ಇರುವಂತ ಅಪೂರ್ವ ಅನುಭಂದವನ್ನ ನೆನೆಯುತ್ತ, 3ನೇ ಪೀಳಿಗೆಯನ್ನ ಪರಿಚಯಿಸುತ್ತಿದ್ದಾರೆ ಹೊಂಬಾಳೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು, ಯಶಸ್ವಿ ನಿರ್ದೇಶಕ ಹಾಗು ಹೊಂಬಾಳೆ ಸಂಸ್ಥೆಗೆ ‘ರಾಜಕುಮಾರ’, ‘ಯುವರತ್ನ’ದಂತಹ ಯಶಸ್ಸುಗಳನ್ನು ದಕ್ಕಿಸಿಕೊಟ್ಟ ಸಂತೋಷ್ ಆನಂದ್ ರಾಮ್ ಅವರು. ಮೂಲಗಳ ಪ್ರಕಾರ ಈ ಕಥೆಯನ್ನ ಪುನೀತ್ ರಾಜಕುಮಾರ್ ಅವರಿಗಾಗಿ ಬರೆಯಲಾಗಿತ್ತಂತೆ.








