• June 28, 2022

ಟಾಲಿವುಡ್ ನಲ್ಲಿ ಸದ್ದು ಮಾಡಲಿದ್ದಾರೆ ಯಶ ಶಿವಕುಮಾರ್

ಟಾಲಿವುಡ್ ನಲ್ಲಿ ಸದ್ದು ಮಾಡಲಿದ್ದಾರೆ ಯಶ ಶಿವಕುಮಾರ್

ಬೈರಾಗಿ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಿತರಾದ ಯಶ ಶಿವಕುಮಾರ್ ಇದೀಗ ಪರಭಾಷೆಯ ಸಿನಿರಂಗದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಕೋಸ್ಟಲ್ ವುಡ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿರುವ ಯಶ ಇದೀಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೌದು, ಹೊಸ ತೆಲುಗು ಸಿನಿಮಾವೊಂದಕ್ಕೆ ಯಶ ಶಿವಕುಮಾರ್ ಸಹಿ ಮಾಡಿದ್ದಾರೆ.

ವೈ ಧರುವೈ ಸಿನಿಮಾದ ಮೂಲಕ ಟಾಲಿವುಡ್ ಅಂಗಳ ಪ್ರವೇಶಿಸಿರುವ ಯಶ ಶಿವಕುಮಾರ್ ಪುರಿ ಜಗನ್ನಾಥ್ ಸಹೋದರ ಸಾಯಿ ರಾಮ್ ಶಂಕರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ನವೀನ್ ನಿರ್ದೇಶನದ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಈಕೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಯಶ ಶಿವಕುಮಾರ್ “ಇಷ್ಟು ಬೇಗ ನನಗೆ ಪರಭಾಷೆಯ ಸಿನಿರಂಗದಿಂದ ಅವಕಾಶ ಬರುತ್ತದೆ ಎಂದು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ಈಗಷ್ಟೇ ನಟನಾ ಕ್ಷೇತ್ರದಲ್ಲಿ ನನ್ನ ಕೆರಿಯರ್ ಆರಂಭವಾಗಿದ್ದು ಇಷ್ಟು ಬೇಗ ಪರಭಾಷೆಯ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ” ಎಂದಿದ್ದಾರೆ.

“ನಾನು ತೆಲುಗು ಸಿನಿಮಾಕ್ಕೆ ಆಯ್ಕೆಯಾಗಲು ಫೋಟೋವೇ ಮುಖ್ಯ ಕಾರಣ. ನನ್ನ ಫೋಟೋ ನೋಡಿದ ಅವರು ನಾನು ನಾಯಕಿಯಾಗಿ ನಟಿಸಲು ಅರ್ಹಳಿದ್ದೇನೆ ಎಂದೇ ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ನನಗೆ ಸಂತಸ ನೀಡಿದೆ. ಉತ್ತಮ ಸಿನಿಮಾ ಹಾಗೂ ತಂಡದ ಮೂಲಕ ತೆಲುಗಿನಲ್ಲಿ ಲಾಂಚ್ ಆಗುತ್ತಿರುವುದಕ್ಕೆ ಸಂತಸವಿದೆ” ಎಂದಿದ್ದಾರೆ.

ಅಂದ ಹಾಗೇ ಯಶ ಶಿವಕುಮಾರ್ ಅವರು ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸಲಿದ್ದಾರೆ.