• March 17, 2022

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ

ಕನ್ನಡದ ‘ಯುವರತ್ನ’, ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರದ್ದು ಇಂದು 47ನೇ ವರ್ಷದ ಜನುಮದಿನೋತ್ಸವ. 1975ರಲ್ಲಿ ರಾಜ್ ದಂಪತಿಯ ಕುಡಿಯಾಗಿ ಹುಟ್ಟಿದ ಇವರು ಇಂದು ಕರುನಾಡ ಮನೆಯ ಮಗನಾಗಿ ಉಳಿದುಕೊಂಡಿದ್ದಾರೆ. ಉಸಿರು ಹೋದರು ಹೆಸರು ಹಸಿರಾಗಿರುವಂತ ಪವರ್ ಸ್ಟಾರ್ ನ ಜನ್ಮದಿನವನ್ನ ರಾಜ್ಯಾದ್ಯಂತ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದಾರೆ.

ಸಿನಿಮಾ ಬಿಡುಗಡೆಗೂ ಮುಂಚೆಯೇ ಟಿಕೆಟ್ ಗಳು ಒಮ್ಮೆಲೆ ಮಾರಾಟವಾಗಿದ್ದವು, ನಡುರಾತ್ರಿಯಲ್ಲಿಟ್ಟಿದ್ದ ಶೋಗಳು ಕೂಡ ಹೌಸ್ ಫುಲ್ ಆಗುವುದರ ಜೊತೆಗೆ ಚಿತ್ರಮಂದಿರದ ಸುತ್ತಮುತ್ತ ಪಟಾಕಿಯ ಸದ್ದೇ ನಿನಾದವಾದಂತೆ ಕೇಳಿಬರುತ್ತಿತ್ತು. ಒಂದು ಕನ್ನಡ ಸಿನಿಮಾದ ಬಿಡುಗಡೆಗೆ ಇಷ್ಟೊಂದು ಸಡಗರವಾಗಿ ದಶಕಗಳೇ ಕಳೆದಿದ್ದವೇನೋ. ಪ್ರಪಂಚದಾದ್ಯಂತ ಅತೀ ಹೆಚ್ಚು ಶೋಗಳನ್ನು ಕಂಡಂತ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ, ಬೆಂಗಳೂರಿನಲ್ಲೇ 800ಕ್ಕೂ ಹೆಚ್ಚು ಶೋಗಳು, ಮೈಸೂರಿನಲ್ಲಿದ್ದ 86 ಶೋಗಳಲ್ಲಿ ಸಂಪೂರ್ಣ ಟಿಕೆಟ್ ಗಳ ಮಾರಾಟ, ಕರ್ನಾಟಕದಾದ್ಯಂತ ಒಂದು ಸಾವಿರಕ್ಕೂ ಹೆಚ್ಚಿನ ಶೋಗಳು. ಇಷ್ಟೆಲ್ಲಾ ಹೆಗ್ಗಳಿಕೆ ಇರುವುದು, ಪುನೀತ್ ರಾಜಕುಮಾರ್ ಅವರು ಕೊನೆಯ ಬಾರಿ ಸಂಪೂರ್ಣ ಮಟ್ಟದ ನಾಯಕನಾಗಿ ನಟಿಸಿರುವ ‘ಜೇಮ್ಸ್’ ಚಿತ್ರದ್ದು. ಅಪ್ಪು ಹುಟ್ಟಿದ ದಿನವೇ ಸಿನಿಮಾ ತೆರೆಕಂಡಿದ್ದು ಸದ್ಯ ಎಲ್ಲ ಪರದೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ವಿಶೇಷ ಸಿನಿಮಾವನ್ನ ಅಪ್ಪು ಅಭಿಮಾನಿಗಳು ಇನ್ನಷ್ಟು ವಿಶೇಷವಾಗಿಸಿದ್ದಾರೆ. ಹಲವೆಡೆ ಚಿತ್ರಮಂದಿರಗಳಲ್ಲಿ 17ನೇ ನಂಬರ್ ನ ಕುರ್ಚಿಯನ್ನು ಖಾಲಿ ಬಿಡಲಾಗಿದೆ, ಅಂದರೆ ಅಪ್ಪುವಿಗಾಗಿ ಮೀಸಲಿಡಲಾಗಿದೆ. ಅಪ್ಪು ಜನುಮದಿನದ ಸಲುವಾಗಿ ಸಾವಿರಾರು ಅಭಿಮಾನಿಗಳು ನೇತ್ರಾದಾನ ಹಾಗು ರಕ್ತದಾನದಲ್ಲಿ ತೊಡಗಿಕೊಂಡಿದ್ದಾರೆ. ಹಲವೆಡೆ ಅನ್ನದಾನ ಕೂಡ ನಡೆಯುತ್ತಿದೆ. ಇನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಶಿವರಾಜಕುಮಾರ್ ಹಾಗು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಒಂದಾಗಿ ಸುಮಾರು 30 ಕಟ್-ಔಟ್ ಗಳನ್ನ ಏರಿಸಿದ್ದಾರೆ. ಬೆಂಗಳೂರಿನ ವೀರಭದ್ರೇಶ್ವರ ಥೀಯೇಟರ್ ನಲ್ಲಿ ಬೆಳಗಿನ ಜಾವ 6 ಗಂಟೆಗೆ ಸಿನಿಮಾ ನೋಡಲು ಬಂದವರಿಗೆ ಕಾಫಿ-ಬಿಸ್ಕತ್, 9ರ ಹೊತ್ತಿಗೆ ಬಂದವರಿಗೆ ಉಪಹಾರ, ಮಧ್ಯಾಹ್ನ ಬಿರಿಯಾನಿ ಹಾಗು ಸಂಜೆಗೆ ಗೋಬಿ ಮಂಚೂರಿ ಮುಂತಾದವುಗಳನ್ನ ಉಚಿತವಾಗಿ ಹಂಚಲಾಗಿದೆ.

ಇಂದು ಬಿಡುಗಡೆಯಾದ ‘ಜೇಮ್ಸ್’ ಚಿತ್ರ ಇಂದು ಪಾನ್-ಇಂಡಿಯನ್ ಸಿನಿಮಾ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮಲಯಾಳಂ ಹಾಗು ಹಿಂದಿ ಭಾಷೆಯಲ್ಲೂ ಸಿನಿಮಾ ತೆರೆಕಾಣುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೊತೆಗೆ ಚರಣ್ ರಾಜ್ ಸಂಗೀತ, ಕಿಶೋರ್ ಪಾತಿಕೊಂಡ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾದರೆ, ಶ್ರೀಕಾಂತ್, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದ ದೊಡ್ಡ ತಾರಾಗಣವೇ ತುಂಬಿದೆ. ವಿಶೇಷವೆಂದರೆ ಶಿವರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ಅವರು ಕೂಡ ಈ ಚಿತ್ರಕ್ಕಾಗಿ ಅಪ್ಪುವಿನೊಂದಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಅಪ್ಪುವಿನ ಪಾತ್ರಕ್ಕೆ ಸ್ವತಃ ಶಿವರಾಜಕುಮಾರ್ ದನಿಯಗಿದ್ದಾರೆ.

ಅಭಿಮಾನಿಗಳ ಆರಾಧ್ಯದೈವ ಅಪ್ಪು ಸದ್ಯ ನಮ್ಮೊಂದಿಗಿಲ್ಲ. ಆದರೆ ಅವರ ಆಚಾರಗಳು-ಆದರ್ಶಗಳು ಸದಾ ಜೀವಂತ. ಆ ನಗು ಎಲ್ಲರ ಕಂಗಳಿಗೂ ಸದಾ ಚಿರಪರಿಚಿತ.