- April 12, 2022
ಬಾಲ್ಯದಲ್ಲಿ ದಪ್ಪಗಿದ್ದ ಕಾರಣ ಬಾಡಿ ಶೇಮಿಂಗ್ ಗೆ ಒಳಗಾಗಿದ್ದೆ ಎಂದ ವೈಷ್ಣವಿ


ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ವೈಷ್ಣವಿ ಬೆಳ್ಳಿತೆರೆಯಲ್ಲಿಯೂ ಮೋಡಿ ಮಾಡಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಬಿಗ್ ಬಾಸ್ ನಿಂದ ಬಙದ ಬಳಿಕ ನಟನೆಯಿಂದ ದೂರವಿದ್ದ ವೈಷ್ಣವಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.


ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಈ ಸಿನಿಮಾ ತೊನ್ನು ರೋಗದ ಕುರಿತಾಗಿದೆ. ಇದರ ಬಗ್ಗೆ ಮಾತನಾಡಿರುವ ವೈಷ್ಣವಿ “ಈ ಸಿನಿಮಾ ವಿಭಿನ್ನ ವಿಷಯದಿಂದ ವ್ಯವಹರಿಸುತ್ತದೆ ಎಂಬ ಅಂಶದ ಹೊರತಾಗಿ ನಾನು ಕೂಡಾ ಇಂತಹ ವಿಚಾರವನ್ನು ವೈಯಕ್ತಿಕವಾಗಿ ಪ್ರತಿಧ್ವನಿಸಿದ್ದೇನೆ. ನಾನು ಬಾಲ್ಯದಲ್ಲಿ ದಪ್ಪ ಇದ್ದೆ ಹಾಗೂ ನನ್ನ ಎತ್ತರದ ವಿಚಾರವಾಗಿ ಅವಮಾನ ಎದುರಿಸಿದ್ದೇನೆ” ಎಂದಿದ್ದಾರೆ.


“ಬಾಲ್ಯದಲ್ಲಿ ನನಗೆ ದೈಹಿಕ ಚಟುವಟಿಕೆಗಳು ಅಷ್ಟಾಗಿ ಇರಲಿಲ್ಲ. ನನ್ನ ಹೆತ್ತವರು ಇಬ್ಬರೂ ಉದ್ಯೋಗಕ್ಕೆ ತೆರಳುತ್ತಿದ್ದರು. ನಾನು ಮನೆಯಲ್ಲಿ ಕುಳಿತುಕೊಂಡೇ ಸಮಯ ಕಳೆಯುತ್ತಿದ್ದೆ. ಇದು ತೂಕ ಹೆಚ್ಚಲು ಕಾರಣವಾಯಿತು. ಆ ಪ್ರಾಯದಲ್ಲಿ ಜನ ನನ್ನನ್ನು ಗುಂಡಮ್ಮ ಎಂದು ಕರೆಯುತ್ತಿದ್ದರು. ಇದು ನಿಮಗೆ ಮಾನಸಿಕವಾಗಿ ಪ್ರಭಾವ ಬೀರುತ್ತದೆ ಹಾಗೂ ಏನು ಮಾಡಬೇಕೆಂದು ತಿಳಿದಿರುವುದಿಲ್ಲ” ಎಂದು ಎಳವೆಯಲ್ಲಿಯೇ ಬಾಡಿ ಶೇಮಿಂಗ್ ಗೆ ಒಳಗಾದ ವಿಚಾರವನ್ನು ಹಂಚಿಕೊಂಡಿದ್ದರು ವೈಷ್ಣವಿ.


“ಹದಿಹರೆಯಕ್ಕೆ ಬಂದಾಗ ನಾನು ತೂಕ ಇಳಿಸಿಕೊಂಡೆ. ಇವತ್ತಿಗೂ ಈ ಸಮಸ್ಯೆಯನ್ನು ನಿಭಾಯಿಸುತ್ತಿದ್ದೇನೆ. ನಾನು ಅಗಲವಾದ ಸೊಂಟ ಹಾಗೂ ತೆಳ್ಳಗಿನ ದೇಹದ ಮೇಲ್ಭಾಗ ಹೊಂದಿದ್ದೇನೆ. ಇದು ನನಗೆ ತೊಂದರೆ ಕೊಡುವುದಿಲ್ಲ. ಪ್ರತಿಯೊಬ್ಬರೂ ಅವರವರ ಹಾದಿಯಲ್ಲಿ ಉತ್ತಮರು ಹಾಗೂ ಸುಂದರವಾಗಿರುತ್ತಾರೆ. ಅವರನ್ನು ಹಾಗೆಯೇ ನಾವು ಒಪ್ಪಿಕೊಳ್ಳಬೇಕು. ಇದುವೇ ಈ ಚಿತ್ರವನ್ನು ಒಪ್ಪಿಕೊಳ್ಳುವಂತೆ ಮಾಡಿತು” ಎಂದಿದ್ದಾರೆ.






