• July 4, 2022

ಕನ್ನಡಕ್ಕೆ ಹೊಸ ಕೊಡುಗೆ ‘ಟೈಗರ್ ಟಾಕಿಸ್’

ಕನ್ನಡಕ್ಕೆ ಹೊಸ ಕೊಡುಗೆ ‘ಟೈಗರ್ ಟಾಕಿಸ್’

ವಿನೋದ್ ಪ್ರಭಾಕರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಟೈಗರ್ ಪ್ರಭಾಕರ್ ಪುತ್ರನಾಗಿ ಮರಿ ಟೈಗರ್ ಅಂತಲೇ ಖ್ಯಾತಿ ಪಡೆದಿರುವವರು. ತಮ್ಮ ಸಿನಿಮಾ ಜರ್ನಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡವರು. ಆದರೂ ವಿನೋದ್ ಪ್ರಭಾಕರ್ ತಮ್ಮದೇ ಆದಂತಹ ಇಮೇಜ್ ಇಟ್ಟುಕೊಂಡಿದ್ದಾರೆ.

ಸಾಲು ಸಾಲು ಮಾಸ್ ಸಿನಿಮಾಗಳನ್ನೇ ಮಾಡಿರುವ ವಿನೋದ್ ಪ್ರಭಾಕರ್ ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇದೀಗ ತಮ್ಮ ಸಿನಿ ಜರ್ನಿಯಲ್ಲಿ ಮತ್ತೊಂದು ಹೆಜ್ಜೆಯಿಡಲು ಹೊರಟಿದ್ದಾರೆ. ವಿನೋದ್ ಪ್ರಭಾಕರ್ ನಾಯಕ ನಟ ಎನ್ನುವುದರೊಂದಿಗೆ ನಿರ್ಮಾಪಕನಾಗಲೂ ಬಯಸಿದ್ದಾರೆ.

ಹೌದು, ನಟ ವಿನೋದ್ ಪ್ರಭಾಕರ್ ನಿರ್ಮಾಪಕನಾಗಿ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಲು ಮುಂದಾಗಿದ್ದಾರೆ. ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಸಹಯೋಗದೊಂದಿಗೆ ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಾಥ್ ನೀಡಿದ್ದಾರೆ.

ಅಂದ ಹಾಗೆ ಈ ನಿರ್ಮಾಣ ಸಂಸ್ಥೆಗೆ ವಿನೋದ್ ಪ್ರಭಾಕರ್ ‘ಟೈಗರ್ ಟಾಕೀಸ್’ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಸದ್ಯ ಈ ಟೈಗರ್ ಟಾಕೀಸ್ ಲೋಗೋ ಲಾಂಚ್ ಆಗಿದ್ದು, ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ.

ಟೈಗರ್ ಟಾಕೀಸ್‌ನಲ್ಲಿ ಮುಂದೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸನ್ನು ವಿನೋದ್ ಪ್ರಭಾಕರ್ ಹೊಂದಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಬೇರೆಯವರಿಗೆ ಸಿನಿಮಾ ಮಾಡುವ ಅವಕಾಶ ದೊರೆಯಲಿದೆ. ಹೊಸಬರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಟೈಗರ್ ಟಾಕೀಸ್ ಉತ್ತಮ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುವ ಧ್ಯೇಯವನ್ನು ಹೊಂದಿದೆ.

ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಮೊದಲಿನಿಂದಲೂ ಆಪ್ತ ಸ್ನೇಹಿತರು. ಇದೀಗ ಟೈಗರ್ ಟಾಕೀಸ್ ಲೋಗೋ ಲಾಂಚ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ತಮ್ಮ ಗೆಳೆಯನಿಗೆ ಶುಭ ಹಾರೈಸಿದ್ದಾರೆ. ವಿಡಿಯೋ ಮೂಲಕ ಟೈಗರ್ ಟಾಕೀಸ್ ಲೋಗೊ ಲಾಂಚ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದರ್ಶನ್ ಹೊಸಬರಿಗೆ ಹೆಚ್ಚಿನ ಅವಕಾಶಗಳು ಸಿಗಲಿ ಟೈಗರ್ ಟಾಕೀಸ್ ಉಪಯುಕ್ತವಾಗಲಿ ಎಂದಿದ್ದಾರೆ.