- June 18, 2022
‘ವಿಕ್ರಾಂತ್ ರೋಣ’ನ ಲೋಕದ ಝಲಕ್ ಗೆ ಮುಹೂರ್ತ ಫಿಕ್ಸ್.


ಭಾರತದಾದ್ಯಂತ ಸದ್ಯ ಕನ್ನಡದ ಪಾನ್-ಇಂಡಿಯನ್ ಸಿನಿಮಾಗಳು ಸದ್ದು ಮಾಡುತ್ತಿವೆ. ‘ಕೆಜಿಎಫ್ ಚಾಪ್ಟರ್ 2’ನ ಸದ್ದು ಇನ್ನು ಮುಗಿದಿಲ್ಲ. ಈಗ ‘777 ಚಾರ್ಲಿ’ ಎಲ್ಲರ ಮನ ಕದಿಯುತ್ತಿದೆ. ಈ ಸಾಲಿನಲ್ಲಿರುವ ಕನ್ನಡದ ಮುಂದಿನ ಪಾನ್-ಇಂಡಿಯನ್ ಸಿನಿಮಾ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’. ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನದ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ನಟಿಸಿರುವ ಈ ಸಿನಿಮಾದ ಹೊಸ ಅಪ್ಡೇಟ್ ಅನ್ನು ಚಿತ್ರತಂಡ ಹೊರಹಾಕಿದೆ.




ಪಂಚ ಭಾರತೀಯ ಭಾಷೆಗಳು ಹಾಗು ಇಂಗ್ಲೀಷ್ ನಲ್ಲೂ ಕೂಡ ಬಿಡುಗಡೆಯಾಗಲಿರೋ ಈ ಬಹು ನಿರೀಕ್ಷಿತ ಸಿನಿಮಾದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟಿದೆ ಚಿತ್ರತಂಡ. ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಇದೇ ಜೂನ್ 23ರಂದು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ವಿಶೇಷ ಮೋಷನ್ ಪೋಸ್ಟರ್ ಒಂದರ ಮೂಲಕ ಈ ಸುದ್ದಿ ಹೊರಬಿಟ್ಟಿದೆ ಚಿತ್ರತಂಡ. ಕುತೂಹಲ ಕೆರಳಿಸಿರೋ ‘ವಿಕ್ರಾಂತ್ ರೋಣ’ ಎಂಬ ‘ಫಾಂಟಮ್’ನ ಲೋಕವನ್ನು ನೋಡಲು ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.




‘ವಿಕ್ರಾಂತ್ ರೋಣ’ ಚಿತ್ರತಂಡ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಪ್ರೇಕ್ಷಕರಿಗೆ ತಿಳಿಸುತ್ತಾ, ತಮ್ಮ ಸಿನಿಮಾದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡುವ ಹಾಗೇ ಮಾಡಿಟ್ಟಿದ್ದಾರೆ. ಚಿತ್ರೀಕರಣ ಆರಂಭಿಸುವುದರಿಂದ ಹಿಡಿದು, ಇಂಗ್ಲೀಷ್ ಡಬ್ಬಿಂಗ್ ಮುಗಿಸಿದ್ದರ ವರೆಗೆ ಪ್ರತಿಯೊಂದನ್ನು ಸಹ ಸಿನಿಮಾದ ಝಲಕ್ ಒಂದರ ಜೊತೆಗೆ ಕೂಡಿಸಿ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ. ಅನೂಪ್ ಭಂಡಾರಿ ರಚಿಸಿ ನಿರ್ದೇಶಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಸುದೀಪ್ ನಾಯಕರಾದರೆ, ಇವರ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಜುಲೈ 28ಕ್ಕೆ ಪ್ರಪಂಚದಾದ್ಯಂತ 3ಡಿ ಯಲ್ಲಿ ಸಿನಿಮಾ ಬಿಡುಗಡೆಯಗುತ್ತಿದ್ದು, ಇದೇ ಜೂನ್ 23ಕ್ಕೆ ಸಿನಿಮಾದ ಟ್ರೈಲರ್ ‘ಟಿ-ಸೀರೀಸ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.






