- June 24, 2022
‘ವಿಕ್ರಾಂತ್ ರೋಣ’ ಟ್ರೈಲರ್ ಬಿಡುಗಡೆಗೆ ಭರ್ಜರಿ ತಯಾರಿ.


ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸನ್ನಿಹಿತವಾಗುತ್ತಿದೆ. ಪಾನ್-ಇಂಡಿಯಾ ಮಟ್ಟದ ಐದು ಭಾಷೆಗಳು ಮಾತ್ರವಲ್ಲದೆ ಇಂಗ್ಲೀಷ್ ನಲ್ಲೂ ಬಿಡುಗಡೆಯಾಗುತ್ತಿರುವ ಈ ಸಿನಿಮಾಗೆ ಪ್ರಪಂಚದಾದ್ಯಂತ ಜನಸಾಗರ ಕಾಯುತ್ತಿದ್ದಾರೆ. ಜೊತೆಗೆ ಚಿತ್ರ 3ಡಿ ಯಲ್ಲಿ ಕೂಡ ಬಿಡುಗಡೆಯಾಗುತ್ತಿದೆ. ಆದರಿಂದ ಸಿನಿಮಾ ಬಗೆಗಿನ ನಿರೀಕ್ಷೆ ಬಹು ಹೆಚ್ಚೆ ಬೆಳೆಯುತ್ತಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಮುಂದಾಗಿದ್ದು ಜೂನ್ 23ರಂದು ಟ್ರೈಲರ್ ಪ್ರೇಕ್ಷಕರ ಮುಂದೆ ಬರಲಿದೆ.


ಜೂನ್ 23ರ ಸಂಜೆ 5:02ಕ್ಕೆ ಸರಿಯಾಗಿ ‘ವಿಕ್ರಾಂತ್ ರೋಣ’ನ ಲೋಕದ ಝಲಕ್ ಅಭಿಮಾನಿಗಳ ಕಣ್ಮುಂದೆ ಕುಣಿಯಲಿದೆ. ‘ಲಹರಿ ಮ್ಯೂಸಿಕ್’ ಹಾಗು ‘ಜೀ ಸ್ಟುಡಿಯೋಸ್’ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಟ್ರೈಲರ್ ಅನ್ನು ಒಂದೊಂದು ಭಾಷೆಗಳಲ್ಲೂ ಒಬ್ಬೊಬ್ಬ ಸ್ಟಾರ್ ನಟರು ಅನಾವರಣಗೊಳಿಸಲಿದ್ದಾರೆ. ತೆಲುಗು ಟೀಸರ್ ಅನ್ನು ರಾಮ್ ಚರಣ್ ಅವರು, ತಮಿಳಿನಲ್ಲಿ ಧನುಷ್, ಮಲಯಾಳಂ ನಲ್ಲಿ ದುಲ್ಕರ್ ಸಲ್ಮಾನ್ ಹಾಗು ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಜೂನ್ 23ರ ಸಂಜೆ 5:02 ಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.






ಜೂನ್ 22ರಿಂದ ಟ್ರೈಲರ್ ನ ಪ್ರೀಮಿಯರ್ ಪ್ರದರ್ಶನಗಳು ನಡೆಯುತ್ತಿದ್ದು, ಕಂಡವರೆಲ್ಲ ರೋಮಾಂಚಿತರಾಗಿದ್ದಾರೆ. ಸಸ್ಪೆನ್ಸ್ ಥ್ರಿಲರ್ ರೀತಿಯ ಕಥೆ ಇದಾಗಿರಲಿದ್ದು, ಕಿಚ್ಚ ಸುದೀಪ್ ಅವರ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫೆರ್ನಾಂಡಿಸ್ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಜಾಕ್ ಮಂಜು ಹಾಗು ಸ್ವತಃ ಕಿಚ್ಚ ಸುದೀಪ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಬಿಜಿಎಂ ಬ್ರಹ್ಮ’ ಎಂದೇ ಖ್ಯಾತರಾಗಿರುವ ಅಜನೀಶ್ ಲೋಕನಾತ್ ಅವರ ಸಂಗೀತ ಚಿತ್ರದಲ್ಲಿರಲಿದೆ. ಈಗಾಗಲೇ ಬಿಡುಗಡೆಯಗಿರುವ ಹಾಡು, ಟೀಸರ್ ಗಳೂ ಸೂಪರ್ ಹಿಟ್ ಆಗಿರುವುದರಿಂದ ಸಿನಿಮಾ ನೋಡಲು ಸಿನಿರಸಿಕರು ಹಾತೊರೆಯುತ್ತಿದ್ದು, ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಮಾಡುತ್ತಿದ್ದಾರೆ.






