- July 7, 2022
‘ಪುಷ್ಪ’ನ ಎದುರು ನಿಲ್ಲಲಿದ್ದಾರ ಸೇತುಪತಿ??


ದಕ್ಷಿಣ ಭಾರತದ ನೆಚ್ಚಿನ ನಟ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ’. ಎರಡು ಭಾಗಗಳಲ್ಲಿ ಬರುತ್ತಿರುವ ಈ ಸಿನಿಮಾ ದಿನಕ್ಕೊಂದು ಹೊಸ ವಿಷಯಕ್ಕೆ ಸುದ್ದಿಯಲ್ಲಿರುತ್ತಿದೆ. ‘ಪುಷ್ಪ: ದಿ ರೈಸ್’ ಎಂಬ ಹೆಸರಿನಿಂದ ತೆರೆಕಂಡಿದ್ದ ಮೊದಲನೇ ಭಾಗ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿ ಉತ್ತಮ ಲಾಭವನ್ನು ಕಂಡಿತ್ತು. ಇದೀಗ ಎರಡನೇ ಭಾಗದ ಸಿದ್ಧತೆಗಳು ನಡೆಯುತ್ತಿದ್ದೂ, ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತಯಾರು ಮಾಡಲು ಚಿತ್ರತಂಡ ಪರಿಶ್ರಮ ಪಡುತ್ತಿದೆ.




ಅಲ್ಲು ಅರ್ಜುನ್ ಅವರ ಜೊತೆಗೆ ಡಾಲಿ ಧನಂಜಯ, ರಶ್ಮಿಕಾ ಮಂದಣ್ಣ, ಸುನಿಲ್, ಅನಸೂಯಾ ಮುಂತಾದ ಕಲಾವಿದರ ಜೊತೆಗೆ ಮಲಯಾಳಂ ನ ಖ್ಯಾತ ನಟ ಫಹಾದ್ ಫಾಸಿಲ್ ಅವರು ಕೂಡ ಚಿತ್ರದ ತಾರಾಗಣದಲ್ಲಿದ್ದರು. ‘ಎಸ್ ಪಿ ಭನ್ವರ್ ಸಿಂಗ್’ ಎಂಬ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ‘ಪುಷ್ಪ’ ಎದುರಾಳಿಯಾಗಿ ಇವರು ಕಾಣಿಸಿಕೊಂಡಿದ್ದು, ಮೊದಲನೇ ಭಾಗದ ಅಂತ್ಯಕ್ಕೆ ಇವರಿಬ್ಬರ ನಡುವಿನ ವೈಮನಸ್ಯ ಇನ್ನಷ್ಟು ಬಿಗಡಾಯಿಸಿದೆ. ಹಾಗಾಗಿ ಇವರಿಬ್ಬರ ನಡುವಿನ ಪೈಪೋಟಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಈ ಎಲ್ಲ ಪಾತ್ರಗಳ ನಡುವೆ ಮತ್ತೊಂದು ಹೊಸ ಪಾತ್ರ ಹಾಗು ಹೊಸ ನಟರು ಚಿತ್ರಕತೆಗೆ ಸೇರುವ ಸುದ್ದಿಗಳು ಕೇಳಿಬರುತ್ತಿವೆ.






ಪಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರೋ ‘ಪುಷ್ಪ’ ಸಿನಿಮಾ ತನ್ನ ಎರಡನೇ ಭಾಗವಾದ ‘ಪುಷ್ಪ:ದಿ ರೂಲ್’ ಚಿತ್ರದ ಮೂಲಕ ರೆಕಾರ್ಡ್ ಗಳನ್ನೆಲ್ಲ ಮುರಿಯುವ ಭರದಲ್ಲಿದೆ. ಸದ್ಯ ಈ ಚಿತ್ರದ ಹೊಸ ಪಾತ್ರವೊಂದಕ್ಕೆ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ವಿಜಯ್ ಸೇತುಪತಿ ಫಹಾದ್ ಫಾಸಿಲ್ ಅವರ ಅವರ ಪಾತ್ರದ ಮೇಲಾಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಂದರೆ ಒಬ್ಬ ಪೊಲೀಸ್ ಅಧಿಕಾರಿಯಾಗಿ. ವಿಜಯ್ ಸೇತುಪತಿ ದಕ್ಷಿಣದ ಖ್ಯಾತ ನಟರು. ಅವರ ಸೇರ್ಪಡೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಈ ಎಲ್ಲ ಬೆಳವಣಿಗೆಗಳಿಂದ ‘ಪುಷ್ಪ’ನ ಸಾಮ್ರಾಜ್ಯ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.






