• April 26, 2022

ತಮಿಳು ನಿರ್ದೇಶಕಿಯ ಜೊತೆ ಕೈಜೋಡಿಸಿದ ‘ಹೊಂಬಾಳೆ’

ತಮಿಳು ನಿರ್ದೇಶಕಿಯ ಜೊತೆ ಕೈಜೋಡಿಸಿದ ‘ಹೊಂಬಾಳೆ’

ನಮ್ಮ ದೇಶ ಮಾತ್ರವಲ್ಲ, ಸದ್ಯ ಇಡೀ ಪ್ರಪಂಚದಾದ್ಯಂತ ಪ್ರಸಿದ್ದರಾಗಿರುವ ಸಿನಿಮಾ ಸಂಸ್ಥೆ ನಮ್ಮ ಕನ್ನಡದ ‘ಹೊಂಬಾಳೆ ಫಿಲಂಸ್’. ಕೆಜಿಎಫ್ ನಂತಹ ಬೃಹತ್ ಚಿತ್ರವನ್ನು ಒಂದು ಸಣ್ಣ ಕಪ್ಪು ಚುಕ್ಕೆಯು ಕಾಣದಂತೆ ನಿರ್ಮಿಸಿ ಜನರ ಮೆಚ್ಚುಗೆಯನ್ನ ಪಡೆದ ನಿರ್ಮಾಣ ಸಂಸ್ಥೆ ಇದು. ವಿಜಯ್ ಕಿರಗಂದೂರ್ ಅವರ ಸಾರಥ್ಯದಲ್ಲಿ ಹಲವಾರು ಅದ್ಭುತ ಚಿತ್ರಗಳನ್ನ ಚಿತ್ರರಂಗಕ್ಕೆ ನೀಡಿರೋ ಹೊಂಬಾಳೆ ಫಿಲಂಸ್, ಇದೀಗ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ.

ನೈಜ ಘಟನೆಗಳನ್ನ ಎತ್ತಿಕೊಂಡು ಅದರಿಂದಲೇ ಸಿನಿಮಾವೊಂದನ್ನ ಹೆಣೆದು ಜನರ ಮುಂದಿಟ್ಟು ಶಭಾಷ್ ಎನಿಸಿಕೊಳ್ಳಬಲ್ಲ ನಿರ್ದೇಶಕಿ ಸುಧಾ ಕೊಂಗರ ಅವರು. ಈಗಾಗಲೇ ‘ಇರುದಿ ಸುತ್ರು’ ಹಾಗು ‘ಸೂರರೈ ಪೋಟ್ರು’ ಚಿತ್ರಗಳಿಂದ ಜನಮನದ ಮಾತಾಗಿರೋ ಮಹಿಳಾ ನಿರ್ದೇಶಕಿ ಇವರು. ಇದೀಗ ಮತ್ತೊಂದು ನೈಜ ಕಥೆಯನ್ನ ಹೇಳಲು ‘ಹೊಂಬಾಳೆ ಫಿಲಂಸ್’ ಸಂಸ್ಥೆ ಜೊತೆಗೆ ಕೈಜೋಡಿಸುತ್ತಿದ್ದಾರೆ ಸುಧಾ ಕೊಂಗರ. ಹೊಂಬಾಳೆ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರಲಿರೋ ಮುಂದಿನ ಚಿತ್ರಕ್ಕೆ ಇವರೇ ನಿರ್ದೇಶಕಿ ಆಗಿರಲಿದ್ದಾರೆ. ಸದ್ಯ ಘೋಷಣೆಯಷ್ಟೇ ಆಗಿರುವ ಈ ಸಿನಿಮಾದ ತಾರಾಗಣ, ನಾಮಕರಣ ಮುಂತಾದವು ಇನ್ನಷ್ಟೇ ಖಾತ್ರಿಯಾಗಬೇಕಿದೆ.

ಪುನೀತ್ ರಾಜಕುಮಾರ್ ಅಭಿನಯದ ‘ನಿನ್ನಿಂದಲೇ’ ಚಿತ್ರದಿಂದ ನಿರ್ಮಾಣವನ್ನು ಆರಂಭಿಸಿದ ‘ಹೊಂಬಾಳೆ ಫಿಲಂಸ್’ ನಂತರ ನಿಲ್ಲಲೇ ಇಲ್ಲ. ಮುಂದೆ ‘ರಾಜಕುಮಾರ’ನಂತಹ ಇಂಡಸ್ಟ್ರಿ ಹಿಟ್ ಸಿನಿಮಾ ಕೊಟ್ಟು ಸೈ ಎನಿಸಿಕೊಂಡಿತ್ತು. ಕೆಜಿಎಫ್ ಚಾಪ್ಟರ್ 1, ಯುವರತ್ನ, ಕೆಜಿಎಫ್ ಚಾಪ್ಟರ್ 2 ಮುಂತಾದ ಯಶಸ್ವಿ ಚಿತ್ರಗಳನ್ನ ನೀಡಿ, ಇದೀಗ ಪಾನ್-ಇಂಡಿಯನ್ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ‘ಕಾಂತಾರ’, ‘ಸಲಾರ್’, ‘ರಾಘವೇಂದ್ರ ಸ್ಟೋರ್ಸ್’ ಹಾಗು ‘ರಿಚರ್ಡ್ ಅಂಟೋನಿ’ ಮುಂತಾದವುಗಳು ಈ ಸಂಸ್ಥೆಯಿಂದ ಬಿಡುಗಡೆಗೋಳ್ಳೋ ಸಾಲಿನಲ್ಲಿವೆ. ಇದೆಲ್ಲದರ ನಡುವೆ ಸುಧಾ ಕೊಂಗರ ಅವರೊಡಗಿನ ಹೊಸ ಚಿತ್ರ ಎಲ್ಲರ ಕುತೂಹಲ ಹೆಚ್ಚಿಸುತ್ತಿದೆ.