• March 23, 2022

‘ರಾಕಿ ಭಾಯ್’ ಜೊತೆಗೆ ಬರಲಿದ್ದಾನೆ ‘ಬೀಸ್ಟ್’!!!

‘ರಾಕಿ ಭಾಯ್’ ಜೊತೆಗೆ ಬರಲಿದ್ದಾನೆ ‘ಬೀಸ್ಟ್’!!!

ಯುದ್ಧ ಮುಗಿಸಿ ಸುಸ್ತಾಗಿ ಗನ್ ಹಿಡಿದು ಕೂತಿರುವಂತ ತಳಪತಿ ವಿಜಯ್ ಅವರನ್ನ ನೋಡಿ ಅಭಿಮಾನಿಗಳು ರೋಮಾಂಚಿತಗೊಂಡರೆ, ಅದರ ಜೊತೆಗೆ ಇದ್ದ ಸಿನಿಮಾದ ಬಿಡುಗಡೆ ದಿನಾಂಕವನ್ನ ನೋಡಿ ಅಚ್ಚರಿಗೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಮಾತುಗಳು ಆರಂಭವಾದವು ಈಗಲೂ ಆಗುತ್ತಲೇ ಇವೆ. ಯಾಕೆಂದರೆ ‘ಬೀಸ್ಟ್’ ಚಿತ್ರತಂಡ ಹೊರಕೊಟ್ಟ ಬಿಡುಗಡೆ ದಿನಾಂಕ ಏಪ್ರಿಲ್ 13.

ಭಾರತದಾದ್ಯಂತ ಪ್ರತೀ ಭಾಷೆಯ ಸಿನಿರಸಿಕನು ಸಹ ಕಾಯುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯಗುವುದು ಏಪ್ರಿಲ್ 14ಕ್ಕೆ. ನರಾಚಿಯ ಬಾಗಿಲು ತೆಗೆಯೋ ಈ ದಿನಾಂಕವನ್ನ ಸುಮಾರು 7 ತಿಂಗಳ ಹಿಂದೆಯೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಆದರೀಗ ತಮಿಳಿನ ನಾಯಕರ ನಾಯಕ ‘ತಳಪತಿ ವಿಜಯ್’ ಅವರ ‘ಬೀಸ್ಟ್’ ಈ ಬಹುನಿರೀಕ್ಷಿತ ಚಿತ್ರಕ್ಕಿಂತ ಒಂದು ದಿನ ಮುಂಚೆ ಬರುತ್ತಿರುವುದು, ಪ್ರತಿಯೊಬ್ಬ ಅಭಿಮಾನಿಗೂ ಆಶ್ಚರ್ಯ ಆರಂಭ ಮಾಡಿದೆ. ಇಲ್ಲಿವರೆಗೆ ಗಾಳಿ ಸುದ್ದಿಯಾಗಿದ್ದ ಈ ವಿಷಯ ನಿನ್ನೆ(ಮಾರ್ಚ್ 22) ಲೋಕಾರ್ಪಣೆಯಾದಾಗ ಒಂದಷ್ಟು ಜನಕ್ಕೆ ಅಚ್ಚರಿಯಾದರೆ, ಇನ್ನೊಂದಷ್ಟು ಜನಕ್ಕೆ ಈ ಮಹಾಸಾಮರವನ್ನು ನೋಡಲು ಕಾತುರತೆ ಹೆಚ್ಚಾಗುತ್ತಾ ಹೋಯ್ತು.

‘ಡಾಕ್ಟರ್’ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪಕುಮಾರ್ ಅವರ ಕಥೆ ಹಾಗು ನಿರ್ದೇಶನದ ಜೊತೆಗೆ ಮೂಡಿಬರುತ್ತಿರೋ ಈ ಚಿತ್ರಕ್ಕೂ ಸಹ ಭಾರತದಾದ್ಯಂತ ವಿಜಯ್ ಅಭಿಮಾನಿಗಳು ಮಹಾ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಅನಿರುಧ್ ಸಂಗೀತ ಚಿತ್ರಕ್ಕಿರಲಿದ್ದು, ಈಗಾಗಲೇ ಬಿಡುಗಡೆ ಆಗಿರೋ ‘ಅರೇಬಿಕ್ ಕುತು’ ಹಾಗು ‘ಜಾಲಿ ಒ ಜಿಮ್ಕಾನ’ ಹಾಡುಗಳು ನೆಟ್ಟಿಗರ ನಿರೀಕ್ಷೆಗಳನ್ನ ನೆಟ್ಟಗೆ ನಿಲ್ಲಿಸಿವೆ. ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ.