- July 5, 2022
ಬರ್ತ್ಡೇ ಬಾಯ್ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸರ್ಪ್ರೈಸ್ ಗಳು


ಕನ್ನಡದ ‘ಡೈನಾಮಿಕ್ ಪ್ರಿನ್ಸ್’ ಎಂದೇ ಹೆಸರಾಗಿರುವ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೆ ಇಂದು(ಜುಲೈ 4) ಜನುಮದಿನದ ಸಂಭ್ರಮ. ತಮ್ಮ ಸಿನಿಪಯಣದಲ್ಲಿ ಏಳು ಬೀಳು ಎಲ್ಲವನ್ನು ಕಂಡುಕೊಂಡಂತಹ ಇವರು ಇದೀಗ ಕನ್ನಡದ ಅತ್ಯಂತ ಆಕ್ಟಿವ್ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರ ಮುಂದಿನ ಸಿನಿಮಾ ತಂಡದವರು ಪೋಸ್ಟರ್ ಹಾಗು ಹಾಡುಗಳ ಮೂಲಕ ತಮ್ಮ ನಾಯಕನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ಸಾಲಿನಲ್ಲಿರುವ ಚಿತ್ರಗಳ ಒಂದು ಮುನ್ನೋಟ ಈ ಕೆಳಗಿದೆ.


ಪ್ರಜ್ವಲ್ ದೇವರಾಜ್ ಅವರ ಸದ್ಯದ ಬಹುನಿರೀಕ್ಷಿತ ಸಿನಿಮಾವೆಂದರೆ ಲೋಹಿತ್ ಹೆಚ್ ಅವರು ನಿರ್ದೇಶಿಸುತ್ತಿರುವ ‘ಮಾಫಿಯ’. ಪ್ರಜ್ವಲ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದ್ದು, ಸಕತ್ ಮಾಸ್ ಆಗಿ ಪೋಸ್ಟರ್ ಕಾಣುತ್ತಿದೆ. ಚಿತ್ರದಲ್ಲಿ ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದರೆ, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.




ಇದಲ್ಲದೆ ಸದ್ಯ ಬಿಡುಗಡೆಗೆ ಸಿದ್ದವಾಗಿರೊ ಇವರ ಮುಂದಿನ ಸಿನಿಮಾ ‘ಅಬ್ಬರ’.ಈ ಚಿತ್ರದಿಂದ ಹೊಸ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ರವಿ ಬಸ್ರುರ್ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಹಾಗು ವಿಜಯ್ ಪ್ರಕಾಶ್ ಅವರು ದನಿಯಾಗಿರುವ ನೀಡಿರೋ ‘ತಲೆ ಕೆಟ್ಟಾಗ’ ಎಂಬ ಈ ಹಾಡನ್ನು ಪ್ರಜ್ವಲ್ ಅವರ ಜನುಮದಿನದ ಸಲುವಾಗಿಯೇ ಬಿಡಲಾಗಿದೆ. ಕೆ ರಾಮ್ ನಾರಾಯಣ್ ಅವರ ನಿರ್ದೇಶನದ ಈ ಸಿನಿಮಾ ಆದಷ್ಟು ಬೇಗ ಚಿತ್ರಮಂದಿರಗಳಿಗೆ ಬರಲಿದೆ.


ಇವುಗಳಷ್ಟೇ ಅಲ್ಲದೇ ಕುಮಾರ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ‘ವೀರಂ’ ಸಿನಿಮಾ ಕೂಡ ತನ್ನ ಚಿತ್ರೀಕರಣ ಮುಗಿಸಿಕೊಂಡಿದ್ದು, ಪೋಸ್ಟರ್ ಒಂದರ ಮೂಲಕ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಚಿತ್ರತಂಡ. ಹಾಗೆಯೇ ಹರಿಪ್ರಸಾದ್ ಜಕ್ಕ ಅವರ ನಿರ್ದೇಶನದ ‘ಗಣ’ ಸಿನಿಮಾದ ಪೋಸ್ಟರ್ ಒಂದನ್ನು ಕೂಡ ಇಂದು ಬಿಡುಗಡೆ ಮಾಡಲಾಗಿದೆ. ಜೊತೆಗೆ ಇಂದು ಪ್ರಜ್ವಲ್ ದೇವರಾಜ್ ಅವರ 38ನೇ ಸಿನಿಮಾ ಕೂಡ ಘೋಷಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ‘ಪಿಡಿ38(PD38)’ ಎಂದು ಹೆಸರಿಡಲಾಗಿರುವ ಈ ಸಿನಿಮಾವನ್ನು ಸುಮಂತ ಕ್ರಾಂತಿ ಅವರು ನಿರ್ದೇಶನ ಮಾಡಲಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಮಾಸ್ ಥೀಮ್ ನಲ್ಲಿರುವ ಪೋಸ್ಟರ್ ಇಂದು ಲೋಕಾರ್ಪಣೆ ಮಾಡಲಾಗಿದ್ದು, ಶೀಘ್ರದಲ್ಲೇ ಶೀರ್ಷಿಕೆ ಹಾಗು ಮೊದಲ ನೋಟ ಹೊರಹಾಕೋ ಭರದಲ್ಲಿದೆ ಚಿತ್ರತಂಡ.




ತಮ್ಮ ವೃತ್ತಿಜೀವನದಲ್ಲಿ ಹಿಟ್ ಹಾಗು ಫ್ಲಾಪ್ ಎರಡನ್ನು ಕಂಡಿರುವ ಪ್ರಜ್ವಲ್ ದೇವರಾಜ್ ಅವರು ಸದ್ಯ ಹಲವು ಹೊಸ ಪ್ರಯತ್ನಗಳನ್ನು ಕೈಗೆಟ್ಟಿಕೊಂಡಿದ್ದಾರೆ. ಸಾಲು ಸಾಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರ ಮುಂದಿನ ಚಿತ್ರ ತೆರೆಕಡೆಗೆ ಬರುವ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ಜನ್ಮದಿನ ಆಚರಣೆಯನ್ನು ಮಾಡುವುದಿಲ್ಲ ಎಂದು ಕನ್ನಡಿಗರಲ್ಲಿ ಮನವಿ ಮಾಡಿರುವುದರಿಂದ ಪ್ರಜ್ವಲ್ ಅವರ ಅಭಿಮಾನಿಗಳು ಇದ್ದಲ್ಲಿಯೇ ಆಶೀರ್ವದಿಸುತ್ತಿದ್ದಾರೆ.






