- July 3, 2022
ಗ್ಲಾಮರ್ ಗೊಂಬೆ ಎನಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದ ತ್ರಿವಿಕ್ರಮ ಬೆಡಗಿ


ಜೂನ್ 24ರಂದು ತೆರೆಕಂಡ ಸಹನಾಮೂರ್ತಿ ನಿರ್ದೇಶನದ ‘ತ್ರಿವಿಕ್ರಮ’ ಸಿನಿಮಾ, ಹೀರೋ ಹೀರೋಯಿನ್ ಇಬ್ಬರ ಪಾಲಿಗೂ ಸವಾಲಿನ ಚಿತ್ರವೇ ಸರಿ. ರವಿಚಂದ್ರನ್ ಪುತ್ರ ವಿಕ್ರಂ ಅವರ ಕನ್ನಡ ಇಂಡಸ್ಟ್ರಿ ಪಯಣ ಈ ಸಿನಿಮಾದ ಮೂಲಕ ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ವಿಕ್ರಂರ ಜೊತೆಗೆ ನಾಯಕಿಯಾಗಿ ಅಭಿನಯಿಸಿದ ಆಕಾಂಕ್ಷ ಶರ್ಮಾರಿಗೂ ಈ ಸಿನಿಮಾ ಅದೃಷ್ಟ ಪರೀಕ್ಷೆ ಇದ್ದಂತೆ.




ರಿಲೀಸ್ ಡೇಗಿಂತ ಮೊದಲು ಎಲ್ಲಾ ಸೆಲೆಬ್ರಿಟಿಗಳ ಮನಸ್ಸಿನಲ್ಲಿರುವ ತಳಮಳ, ಕುತೂಹಲ,ಭಯ ಎಲ್ಲವೂ ಆಕಾಂಕ್ಷ ಅವರ ಮನಸ್ಸಿನಲ್ಲೂ ಇತ್ತು ಎನ್ನುತ್ತಾರೆ ಅವರು. ಆಕಾಂಕ್ಷಾ ಅವರದ್ದು ಮಾಡೆಲಿಂಗ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಚಿರಪರಿಚಿತವಾದ ಮುಖ. ಬಾದಷಾಹ ಹಾಗೂ ಟೈಗರ್ ಶ್ರಾಫ್ ಅವರೊಂದಿಗೆ ಹೆಜ್ಜೆ ಹಾಕಿದ ವಿಡಿಯೋ ಮೂಲಕ ನಿರ್ದೇಶಕಿ ಸಹನಾ ಮೂರ್ತಿ ಇವರನ್ನು ಗುರುತಿಸಿದ್ದರು. ನಂತರ ತ್ರಿವಿಕ್ರಮ ಸಿನಿಮಾಗೆ ಆಯ್ಕೆಯಾದ ಆಕಾಂಕ್ಷಾ 2019 ರಿಂದ ತಮ್ಮ ಕೆರಿಯರನ್ನು ಆರಂಭಿಸಿದರು.


ಮೂರು ವರ್ಷಗಳ ಕನ್ನಡ ಚಿತ್ರತಂಡದೊಂದಿಗಿನ ತಮ್ಮ ಪಯಣವನ್ನು ಮೆಲುಕು ಹಾಕುತ್ತಾ ಆಕಾಂಕ್ಷರವರು ”ನನಗೆ ಈ ಸಿನಿಮಾ ತಂಡ ಅಭಿನಯದ ಕೌಶಲ್ಯವನ್ನು ಹೇಳಿಕೊಟ್ಟಿದೆ. ಜೊತೆಗೆ ಕನ್ನಡ ಕಲಿಯಲು ಸಹಾಯವಾಯಿತು” ಎಂದರು.


ತಮಗೆ ತ್ರಿವಿಕ್ರಮ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಆಕಾಂಕ್ಷಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ”ಇದೊಂದು ಬರಿಯ ಪಾತ್ರವಲ್ಲ. ನಾಯಕಿಗೂ ಮುಖ್ಯ ಭೂಮಿಕೆ ನೀಡಿರುವ ಸಿನಿಮಾ. ನಾಯಕನಿಗೆ ಸರಿಸಮವಾಗಿ ನಿಂತಿರುವ ನಾಯಕಿಯ ಪಾತ್ರ ಎಲ್ಲ ಪ್ರೇಕ್ಷಕರನ್ನು ಆಕರ್ಷಣೀಯವಾಗಿಸುತ್ತದೆ. ನನಗೂ ಬರಿಯ ಗ್ಲಾಮರ್ ಗೊಂಬೆ ಎನಿಸಿಕೊಳ್ಳುವುದಕ್ಕಿಂತ ಒಬ್ಬ ಉತ್ತಮ ನಾಯಕಿ ಹಾಗೂ ಡ್ಯಾನ್ಸರ್ ಆಗಿ ಗುರುತಿಸಿಕೊಳ್ಳುವ ಮಹತ್ವಾಕಾಂಕ್ಷೆ ಇದೆ”ಎಂದರು.








