• July 7, 2022

‘ಥೋರ್’ ಜೊತೆಗೆ ತೆರೆಮೇಲೆ ಕಾಣಿಸಿಕೊಳ್ಳಲಿರುವ ‘ವಿಕ್ರಾಂತ್ ರೋಣ’!!

‘ಥೋರ್’ ಜೊತೆಗೆ ತೆರೆಮೇಲೆ ಕಾಣಿಸಿಕೊಳ್ಳಲಿರುವ ‘ವಿಕ್ರಾಂತ್ ರೋಣ’!!

ಕನ್ನಡದ ಮಡಿಲಿನಿಂದ ಹುಟ್ಟಿ ಬರುತ್ತಿರುವ ಮತ್ತೊಂದು ಬಹು-ನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’.ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಟಿಸಿರೋ ಈ ಸಿನಿಮಾ ತನ್ನ ಬಿಡುಗಡೆಯ ದಿನಾಂಕಕ್ಕೆ ಸನ್ನಿಹಿತವಾಗುತ್ತಿದೆ. ‘ವಿಕ್ರಾಂತ್ ರೋಣ’ನ ಲೋಕವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರೆ, ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆರಂಭದಿಂದಲೂ ಭುರ್ಜ್ ಖಲಿಫದಲ್ಲಿ ಟೀಸರ್ ಬಿಡುಗಡೆಗೋಳಿಸೋ ಮೂಲಕ ದೊಡ್ಡಮಟ್ಟದಲ್ಲೇ ಸುದ್ದಿಯಾಗುತ್ತಿರುವ ಈ ಚಿತ್ರತಂಡ ಮತ್ತೊಂದು ಹೊಸ, ದೊಡ್ಡ ಕೆಲಸಕ್ಕೆ ಕೈ ಹಾಕಿದೆ.

ಪ್ರಪಂಚದಾದ್ಯಂತ ಪ್ರಸಿದ್ದರಾಗಿರುವ, ಅಪಾರ ಅಭಿಮಾನಿ ಬಳಗ ಹೊಂದಿರುವ ಸಿನಿಮಾ ಪ್ರಪಂಚ,’ಮಾರ್ವೆಲ್ ಸಿನಿಮಾಟಿಕ್ ಯೂನಿವರ್ಸ್’. ಈ ಸಂಸ್ಥೆಯ ಹೊಸ ಸಿನಿಮಾವಾದ ‘ಥೋರ್: ಲವ್ ಅಂಡ್ ತಂಡರ್’ ಇದೇ ಜುಲೈ 7ಕ್ಕೆ ಪ್ರಪಂಚದ ವಿವಿಧ ಮೂಲೆಗಳಲ್ಲಿ ಬಿಡುಗಡೆ ಕಾಣುತ್ತಿದೆ. ಇದೊಂದು 3ಡಿ ರೀತಿಯ ಸಿನಿಮಾವಾಗಿದ್ದು, ವಿಶೇಷವೆಂದರೆ ಈ ಸಿನಿಮಾದ ಇಂಟರ್ವಲ್ ಸಂಧರ್ಭದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ 3ಡಿಯಲ್ಲಿಯೇ ಪ್ರದರ್ಶನ ಕಾಣಲಿದೆ. ಭಾರತದಲ್ಲಿ ‘ಥೋರ್ ಲವ್ ಅಂಡ್ ತಂಡರ್’ ಸಿನಿಮಾ 3ಡಿಯಲ್ಲಿ ಎಲ್ಲೆಲ್ಲ ಕಾಣಸಿಗಲಿದೆಯೋ ಆ ಎಲ್ಲ ಕಡೆಯಲ್ಲೂ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ 3ಡಿಯಲ್ಲಿ ಬೆಳ್ಳಿಪರದೆ ಮೇಲೆ ನೋಡಬಹುದಾಗಿದೆ. ಆಯಾ ಪ್ರದೇಶಗಳಿಗೆ ತಕ್ಕ ಹಾಗೇ ಆಯಾ ಭಾಷೆಗಳ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಡುವ ಉಪಾಯ ಮಾಡಿದ್ದಾರೆ ಚಿತ್ರತಂಡ.

ಇದೇ ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಾಣಲಿದ್ದು, ಚಿತ್ರತಂಡ ಬಿರುಸಿನ ಪ್ರಚಾರ ಕಾರ್ಯದಲ್ಲಿ ಮುಳುಗಿದ್ದಾರೆ. ಹಾಡು ಹಾಗು ಟ್ರೈಲರ್ ಗಳು ಪ್ರೇಕ್ಷಕರ ನಿರೀಕ್ಷೆಯನ್ನು ಏರಿಸಿದ್ದು, ‘ವಿಕ್ರಾಂತ್ ರೋಣ’ನ ‘ಫಾಂಟಮ್’ಲೋಕ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪಾನ್-ಇಂಡಿಯಾದ ಪಂಚ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳ ಜೊತೆಗೆ ಇಂಗ್ಲೀಷ್ ನಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಅಜನೀಶ್ ಅವರ ಸಂಗೀತ ಚಿತ್ರದಲ್ಲಿದ್ದು, ನಿರೂಪ್ ಭಂಡಾರಿ, ನೀತಾ ಅಶೋಕ್ ಜಾಕ್ವೆಲಿನ ಫೆರ್ನಾಂಡಿಸ್ ಮುಂತಾದ ನಟರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ತಿಂಗಳ 28ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾದ ಟ್ರೈಲರ್ ಬೆಳ್ಳಿತೆರೆ ಏರೋ ಕಾಲ ಬಂದಿದೆ.