• June 24, 2022

ಚಾರ್ಲಿ ಮೆಚ್ಚಿದ ರಜನಿಕಾಂತ್ ಹೇಳಿದ್ದೇನು ಗೊತ್ತಾ?

ಚಾರ್ಲಿ ಮೆಚ್ಚಿದ ರಜನಿಕಾಂತ್ ಹೇಳಿದ್ದೇನು ಗೊತ್ತಾ?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿರುವ ಈ ಸಿನಿಮಾದ ಕಥೆಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಫಿದಾ ಆಗಿದ್ದಾರೆ. ಭಾವನಾತ್ಮಕ ಸಂದೇಶ ಸಾರುವ ಈ ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೋಡಿದ್ದು ಕಣ್ಣೀರು ಕೂಡಾ ಸುರಿಸಿದ್ದರು.

ಇದೀಗ ತಮಿಳಿನ ಸೂಪರ್ ಸ್ಟಾರ್ ತಲೈವಾ ಅವರು ಕೂಡಾ ಈ ಸಿನಿಮಾವನ್ನು ನೋಡಿದ್ದು ಮನಸಾರೆ ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ ಸ್ವತಃ ರಜನಿಕಾಂತ್ ಅವರೇ ರಕ್ಷಿತ್ ಶೆಟ್ಟಿಗೆ ಕಾಲ್ ಮಾಡಿ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಈ ಸಂತಸದ ವಿಚಾರವನ್ನು ರಕ್ಷಿತ್ ಶೆಟ್ಟಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಇಂದಿನ ದಿನ ಒಂದು ಉತ್ತಮ ಸಂಗತಿಯೊಂದಿಗೆ ಆರಂಭಗೊಂಡಿದೆ. ರಜನಿಕಾಂತ್ ಸರ್ ಅವರು ಕರೆ ಮಾಡಿದ್ದರು. ನಿನ್ನೆ ರಾತ್ರಿ ಅವರು ಚಾರ್ಲಿ ಸಿನಿಮಾ ನೋಡಿದ್ದು ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೆ ಸಿನಿಮಾದ ಡಿಸೈನ್ ನ ಜೊತೆಗೆ ಮೇಕಿಂಗ್ ಅನ್ನು ಕೂಡಾ ಅವರು ಇಷ್ಟಪಟ್ಟಿದ್ದಾರೆ” ಎಂದು ಬರೆದುಕೊಂಡಿದ್ದಾರೆ‌ ರಕ್ಷಿತ್ ಶೆಟ್ಟಿ.

ಇದರ ಜೊತೆಗೆ “ಮುಖ್ಯವಾಗಿ ರಜನಿಕಾಂತ್ ಅವರಿಗೆ ಸಿನಿಮಾದ ಕ್ಲೈಮಾಕ್ಸ್ ಇಷ್ಟವಾಗಿದೆ. ಮಾತ್ರವಲ್ಲ ಈ ಸಿನಿಮಾ ಭಾವನಾತ್ಮಕ ವಾಗಿ ಕೊನೆಗೊಂಡಿದ್ದನ್ನು ಕೂಡಾ ಅವರು ಇಷ್ಟ ಪಟ್ಟಿದ್ದಾರೆ. ಇದು ನನ್ನ ಜೀವನದ ಅದ್ಭುತ ಕ್ಷಣಗಳಲ್ಲಿ ಒಂದು. ಧನ್ಯವಾದಗಳು ರಜನಿಕಾಂತ್ ಸಾರ್” ಎಂದು ಹೇಳಿದ್ದಾರೆ ರಕ್ಷಿತ್ ಶೆಟ್ಟಿ.