- May 7, 2022
ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ ಸ್ಟಾರ್ ನಟರು


ಭಾರತ ಚಿತ್ರರಂಗದ ದಿಗ್ಗಜ ಸ್ಟಾರ್ ಗಳಾದ ಸುದೀಪ್ ಹಾಗು ಅಜಯ್ ದೇವಗನ್ ನಡುವಿನ ಟ್ವೀಟ್ ವಾರ್ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಭಾಷೆಯ ಭೇದಭಾವಗಳ ಬಗ್ಗೆ ಒಂದಷ್ಟು ಗಾಢವಾಗಿಯೇ ಮಾತನಾಡಿದ್ದರು ಇಬ್ಬರು ನಟರು. ಹಿಂದಿ ರಾಷ್ಟ್ರ ಭಾಷೆ ಹೇರಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತ ಕನ್ನಡದ ಪರ ದನಿಯೆತ್ತಿದ್ದ ಸುದೀಪ್ ಅವರಿಗೆ ಎಲ್ಲೆಡೆಯಿಂದ ಬೆಂಬಲಗಳು ಬಂದಿದ್ದವು. ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದು ಅದರ ಪರವಾಗಿ ಮಾತನಾಡಿದ್ದ ಅಜಯ್ ದೇವಗನ್ ಒಂದಷ್ಟು ವಿರೋಧಗಳನ್ನು ಅನುಭವಿಸಿದ್ದರು. ದಕ್ಷಿಣ ಭಾರತದ ದೊಡ್ಡ ವ್ಯಕ್ತಿಗಳೆಲ್ಲ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯಾಗುತ್ತಾ ಅಜಯ್ ದೇವಗನ್ ಅವರ ಹೇಳಿಕೆಯ ಮೇಲೆ ಕಿಡಿಕಾರಿದ್ದರು. ಸದ್ಯ ಇದೆಲ್ಲ ತಣ್ಣಗಾಗಿದ್ದು ಹೊಸ ವಿಷಯವೊಂದು ತಲೆ ಎತ್ತಿದೆ.






‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ ಅವರ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ಎಲ್ಲೆಡೆ ಬಹುನಿರೀಕ್ಷೆಗಳನ್ನು ಬೆನ್ನಿಗಂಟಿಸಿಕೊಂಡಿದೆ. ‘ರಂಗಿತರಂಗ’ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾ ಬಿಟ್ಟಂತಹ ಟೀಸರ್ ಗಳಿಂದ ಜನರನ್ನ ತಮ್ಮ ಸಿನಿಮಾಗಾಗಿ ಕಾಯುವಂತೆ ಮಾಡಿದೆ. ಇತ್ತೀಚೆಗಷ್ಟೇ ಸಿನಿಮಾದ ಬಿಡುಗಡೆ ದಿನಾಂಕವನ್ನ ಹೊರಹಾಕಿರುವ ಚಿತ್ರತಂಡ ಇದೇ ಜುಲೈ 28ರಂದು ಪ್ರಪಂಚದ ವಿವಿಧ ಭಾಗಗಳಲ್ಲಿ ಒಟ್ಟು ಸುಮಾರು ಎಂಟು ಭಾಷೆಗಳಲ್ಲಿ ಸಿನಿಮಾವನ್ನ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈಗ ಬಂದಿರುವ ಹೊಸ ಸುದ್ದಿಯೆಂದರೆ, ಬಾಲಿವುಡ್ ನ ಸ್ಟಾರ್ ಅಜಯ್ ದೇವಗನ್ ಅವರ ಅಭಿನಯದ ‘ಥಾಂಕ್ ಗಾಡ್(Thank God) ಚಿತ್ರವನ್ನು ಸಹ ಅದೇ ವೇಳೆಗೆ ಬಿಡುಗಡೆಗೊಳಿಸುತ್ತಿರುವುದು. ಹೌದು, ‘ಥಾಂಕ್ ಗಾಡ್’ ಚಿತ್ರವನ್ನ ಜುಲೈ ತಿಂಗಳ 29ನೇ ತಾರೀಕಿನಂದು ರಿಲೀಸ್ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದೆ ಚಿತ್ರತಂಡ. ಈ ಸನಿಹದ ಬಿಡುಗಡೆಗಳು ಕಾಕಾತಾಳೀಯವಾಗಿದ್ದರು ಇರಬಹುದು. ಆದರೆ ಸಿನಿಪ್ರೇಮಿಗಳ ಕಣ್ಣಿಗೆ ಇದೊಂದು ಹಣಾಹಣಿಯಂತೆ ಕಾಣಿಸುತ್ತಿದೆ.












