• June 19, 2022

ನನ್ನ ಗೆಲುವು ಜನರ ಒಪ್ಪಿಗೆಯ ಮೇಲಿದೆ – ಸೋನು ಗೌಡ

ನನ್ನ ಗೆಲುವು ಜನರ ಒಪ್ಪಿಗೆಯ ಮೇಲಿದೆ – ಸೋನು ಗೌಡ

ವಿಕ್ರಮ್ ಪ್ರಭು ಅವರ ನಿರ್ಮಾಣ ಹಾಗೂ ನಿರ್ದೇಶನಡಿಯಲ್ಲಿ ಮೂಡಿಬಂದಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮುಂದಿನ ತಿಂಗಳು ಅಂದರೆ ಜುಲೈ 8 ರಂದು ತೆರೆ ಕಾಣಲಿದೆ. ಮದುವೆಯ ವ್ಯವಸ್ಥೆಯ ಕುರಿತ ಕಥಾ ಹಂದರವನ್ನೊಳಗೊಂಡ ವೆಡ್ಡಿಂಗ್ ಗಿಫ್ಟ್ ನ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

ವೆಡ್ಡಿಂಗ್ ಗಿಫ್ಟ್ ನಲ್ಲಿ ನಟಿ ಸೋನು ಗೌಡ ನಾಯಕಿಯಾಗಿ ನಟಿಸಿದ್ದು ಇದರಲ್ಲಿ ಅವರು ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಸೋನು ಗೌಡ “ವೆಡ್ಡಿಂಗ್ ಗಿಫ್ಟ್ ಒಂದು ಭಾವನಾತ್ಮಕ ಸಿನಿಮಾ ಹೌದು. ಜೀವನದಲ್ಲಿ ಯಾರೆಲ್ಲಾ ಈ ರೀತಿಯ ಕಷ್ಟಗಳನ್ನು ಈಗಾಗಲೇ ಅನುಭವಿಸಿದ್ದಾರೋ ಅವರಿಗೆಲ್ಲಾ ಈ ಸಿನಿಮಾ ಬಹುಬೇಗ ಹತ್ತಿರವಾಗುವುದಂತೂ ನಿಜ. ಈ ಪಾತ್ರ ಮಾಡುವಾಗ ನನಗೆ ತುಂಬಾ ಕಷ್ಟವಾಯಿತು” ಎಂದು ಹೇಳುತ್ತಾರೆ.

“ಬಹು ಮುಖ್ಯವಾದ ವಿಚಾರವೆಂದರೆ ಈ ಸಿನಿಮಾದಲ್ಲಿ ನಾನು ಕೇವಲ ಪಾಸಿಟಿವ್ ಮಾತ್ರವಲ್ಲದೇ ನೆಗೆಟಿವ್ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದೇನೆ. ಒಂದೇ ಪಾತ್ರವಾದರೂ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಲು ಸಿಕ್ಕಿರುವುದು ನಿಜಕ್ಕೂ ಸಂತಸದ ವಿಚಾರ. ನೆಗೆಟಿವ್ ಶೇಡ್ ಇರುವ ಪಾತ್ರವನ್ನು ಜನ ಒಪ್ಪಿಕೊಂಡರೆ ನಾನು ಗೆದ್ದಂತೆ” ಎಂದು ಹೇಳುತ್ತಾರೆ ಸೋನು ಗೌಡ.

ಇನ್ನು ವೆಡ್ಡಿಂಗ್ ಗಿಫ್ಟ್ ಮೂಲಕ ಮೊದಲ ಬಾರಿ ನಿರ್ದೇಶಕರಾಗಿ ಭಡ್ತಿ ಪಡೆದಿರುವ ವಿಕ್ರಮ್ ಪ್ರಭು “ಇದೇ ಮೊದಲ ಬಾರಿಗೆ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದೇನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾ ಮಾಡುತ್ತಿದ್ದೇನೆ ಎಂಬ ಖುಷಿಯಿದೆ” ಎಂದು ಹೇಳುತ್ತಾರೆ.