• April 17, 2022

ಕಿರುತೆರೆ ಜಗತ್ತಿನ ಸ್ಟೈಲಿಶ್ ವಿಲನ್ ಇವರೇ ನೋಡಿ

ಕಿರುತೆರೆ ಜಗತ್ತಿನ ಸ್ಟೈಲಿಶ್ ವಿಲನ್ ಇವರೇ ನೋಡಿ

ಪ್ರಿಯಾಂಕಾ ಶಿವಣ್ಣ.. ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಈಕೆಯ ಹೆಸರು ಸೀರಿಯಲ್ ಪ್ರಿಯರಿಗೆ ಕೊಂಚ ಅಪರಿಚಿತ ಎಂದೆನಿಸಿದರೆ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ಕಿರುತೆರೆ ಎಂಬ ಪುಟ್ಟ ಪ್ರಪಂಚದಲ್ಲಿ ಆಕೆ ಚಂದ್ರಿಕಾ ಆಗಿ ಫೇಮಸ್ಸು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರೋಬ್ಬರಿ ಎಂಟು ವರ್ಷಗಳ ಕಾಲ ಪ್ರಸಾರವಾಗಿ ವೀಕ್ಷಕರನ್ನು ರಂಜಿಸುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕಿ ಚಂದ್ರಿಕಾ ಆಗಿ ಅಭಿನಯಿಸಿರುವ ಪ್ರಿಯಾಂಕಾ ಇಂದು ಕರುನಾಡಿನಾದ್ಯಂತ ಮನೆ ಮಾತಾಗಿದ್ದಾರೆ.

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ “ಜನ ಮೆಚ್ಚಿದ ಮಂಥರೆ” ಪ್ರಶಸ್ತಿ ಪಡೆದು ತಾನೊಬ್ಬ ಅದ್ಭುತ ಖಳನಾಯಕಿ ಎಂದು ತೋರಿಸಿರುವ ಗಟ್ಟಿಗಿತ್ತಿ ಇಂದು ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ನಾಯಕಿ ಸತ್ಯ ಳ ಅಕ್ಕ ದಿವ್ಯಳಾಗಿ ಅಭಿನಯಿಸುತ್ತಿರುವ ಪ್ರಿಯಾಂಕಾ ಶಿವಣ್ಣ ಇಲ್ಲಿ ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇನ್ನು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೃಷ್ಣ ಸುಂದರಿ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆ ಐಶ್ವರ್ಯಾ ಆಗಿ ಅಭಿನಯಿಸುತ್ತಿರುವ ಪ್ರಿಯಾಂಕಾ ಜೀ ಕುಟುಂಬಂ ಅವಾರ್ಡ್ಸ್ ನಲ್ಲಿ “ಸ್ಟೈಲಿಶ್ ವಿಲನ್” ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪವನ್ ನಿರ್ದೇಶನದ ಫ್ಯಾಂಟಸಿ ಸಿನಿಮಾದ ಮೂಲಕ ಹಿರಿತೆರೆಗೂ ಕಾಲಿಟ್ಟಿದ್ದು ಅಲ್ಲಿಯೂ ಈಕೆ ನಟಿಸುತ್ತಿರುವುದು ಖಳನಾಯಕಿಯಾಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಶಿವಣ್ಣ ಮುಂದೆ ನಟಿಸಿದ್ದು ಒಂದೂರಲ್ಲಿ ರಾಜ ರಾಣಿ ಧಾರಾವಾಹಿಯಲ್ಲಿ. ಪರಿಣಯ ಧಾರಾವಾಹಿಯಲ್ಲಿಯೂ ಅಭಿನಯಿಸಿರುವ ಈಕೆಗೆ ನಂತರ ಬದಲಾಗಿದ್ದು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಆಗಿ.

ಚಂದ್ರಿಕಾ ಪಾತ್ರ ಮುಗಿದು ವರ್ಷ ಎರಡಾಗುತ್ತಾ ಬಂದರೂ ಆಕೆಯನ್ನು ಜನ ಗುರುತಿಸುವುದು ಇದೇ ಪಾತ್ರದಿಂದ. ಅಷ್ಟರ ಮಟ್ಟಿಗೆ ಚಂದ್ರಿಕಾ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಇದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ
ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಈಕೆ ತಮ್ಮ ಮಾತು, ನಡವಳಿಕೆ ಮೂಲಕವೂ ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ.