• June 7, 2022

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

ಲೈಫು ಇಷ್ಟೇನೆ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಂಯುಕ್ತಾ ಹೊರನಾಡು ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ. ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಸಂಯುಕ್ತಾ ಹೊರನಾಡು ಇದೀಗ ಸೌಲಭ್ಯ ವಂಚಿತ ಶಾಲಾ ಮಕ್ಕಳಿಗೆ ಸೌಲಭ್ಯ ನೀಡಲು ಮುಂದಾಗಿದ್ದಾರೆ.

ಹೌದು, ಈಗಾಗಲೇ ರಾಜ್ಯಾದ್ಯಂತ ಶಾಲೆಗಳು ಶುರುವಾಗಿದೆ. ಎರಡು ವರ್ಷಗಳಿಂದ ಶಾಲೆಗೆ ಹೋಗದೇ ಮನೆಯಲ್ಲಿಯೇ ಇರುವ ಮಕ್ಕಳೆಲ್ಲ ಇದೀಗ ಸಂತಸದಿಂದ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಇದರ ನಡುವೆ ಮನೆಯಲ್ಲಿನ ಬಡತನದಿಂದಾಗಿ ಶಾಲೆಗೆ ಹೋಗಲು ಅಸಾಧ್ಯವಾಗುವ ಪರಿಸ್ಥಿತಿಯಲ್ಲಿಯೂ ಅನೇಕರಿದ್ದಾರೆ. ಇಂತಹ ಸೌಲಭ್ಯದಿಂದ ವಂಚಿತರಾಗಿರುವಂತಹ ಮಕ್ಕಳಿಗೆ ನೆರವಾಗಲೆಂದೇ ಕೇರ್‌ ಮೋರ್‌ ಫೌಂಡೇಶನ್ ರೂಪಿಸಿದ್ದು ಇದರ ಮುಂದಾಳತ್ವ ವನ್ನು ನಟಿ ಸಂಯುಕ್ತಾ ಹೊರನಾಡು ವಹಿಸಿದ್ದಾರೆ.

ಆ ಫೌಂಡೇಶನ್ ನ ವತಿಯಿಂದ ಮಕ್ಕಳಿಗೆ ನೆರವಾಗುವ ಅಭಿಯಾನವನ್ನು ಹಮ್ಮಿಕೊಂಡಿದ್ದು ಅದು ಇದೇ ಜೂ.5 ರಿಂದ 20ರವರೆಗೆ ನಡೆಯಲಿದೆ. ಇನ್ನು ಕೇರ್ ಮೋರ್ ಫೌಂಡೇಶನ್ ವತಿಯಿಂದಲೂ ಮಕ್ಕಳಿಗೆ ಬ್ಯಾಗ್ ಗಳನ್ನು ವಿತರಿಸಲಾಗುತ್ತಿದ್ದು, ಇದರ ಜೊತೆಗೆ ಬಳಸದೇ ಇರುವ ಬ್ಯಾಗ್ ಗಳು ಅಥವಾ ಹೊಸ ಬ್ಯಾಗ್ ಗಳನ್ನು ಕೂಡಾ ದೇಣಿಗೆ ನೀಡಬಹುದು ಎಂದು ಸಂಯುಕ್ತಾ ಮನವಿ ಮಾಡಿದ್ದಾರೆ.

ಅಂದ ಹಾಗೇ ಯಾರಾದರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದಿದ್ದರೆ
caremore foundation caremore fdn ಹೆಸರಿನ ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್ ಪೇಜ್‌ಗಳಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು.

ನಟನೆಯ ಹೊರತಾಗಿ ಒಂದಲ್ಲ ಒಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಯುಕ್ತಾ ಅವರು ಈಗ ಶಾಲಾ ಮಕ್ಕಳ ನೆರವಿಗೆ ಕೈ ಜೋಡಿಸಿದ್ದು ಇವರ ಕಾರ್ಯಕ್ಕೆ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈಕೆ ಅನೇಕರಿಗೆ ಸ್ಫೂರ್ತಿಯೂ ಹೌದು.