• July 13, 2022

ಚಾರ್ಲಿ ಸೀನ್ ರಿಕ್ರಿಯೇಟ್ ಮಾಡಿದ ಕನ್ನಡ ನಟ ದಂಪತಿ

ಚಾರ್ಲಿ ಸೀನ್ ರಿಕ್ರಿಯೇಟ್ ಮಾಡಿದ ಕನ್ನಡ ನಟ ದಂಪತಿ

ಅಮೃತಾ ರಾಮಮೂರ್ತಿ ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ನಟಿ. ಸದ್ಯ ಮನೆ, ಮಗು ಹಾಗೂ ಸೋಶಿಯಲ್ ಮೀಡಿಯಾಗಷ್ಟೇ ಮೀಸಲಾಗಿದ್ದಾರೆ. ಮುಂದೆ ಮತ್ತೆ ನಟನಿಗೆ ಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಅಮೃತ ರಾಮಮೂರ್ತಿಯವರ ಪೋಸ್ಟ್ ಒಂದು ಸಕ್ಕತ್ ವೈರಲ್ ಆಗಿದೆ.

ಅಮೃತಾ ರಾಮಮೂರ್ತಿ ಅವರಿಗೆ ಕುಲವಧು ಸೀರಿಯಲ್ ಖ್ಯಾತಿಯನ್ನು ತಂದುಕೊಟ್ಟಿತ್ತು. ಇದಲ್ಲದೇ ‘ಮಿಸ್ಟರ್‌ ಆಂಡ್‌ ಮಿಸ್ಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ನಟಿಸಿದ್ದ ಇವರು ರಾಘವೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿ ಮುಂದೆ ವೈವಾಹಿಕ ಜೀವನಕ್ಕೂ ಕಾಲಿಟ್ಟರು.

ರಾಘವೇಂದ್ರ ಕೂಡ ಕಿರುತೆರೆ ನಟರಾಗಿದ್ದು, ಇಬ್ಬರಿಗೂ ಈಗ ಮುದ್ದಾದ ಹೆಣ್ಣು ಮಗುವಿದೆ. ಈ ಮಗುವಿಗೆ ಪುನೀತ್‌ ರಾಜ್‌ ಕುಮಾರ್‌ ಮಗಳ ಹೆಸರನ್ನೇ ಇಟ್ಟಿರುವುದು ವಿಶೇಷ. ಇದೀಗ ರೀಲ್ಸ್ ಮಾಡಿರುವ ಈ ಜೋಡಿ ಇವರ ಮಗಳನ್ನೇ ಚಾರ್ಲಿ ಮಾಡಿದ್ದಾರೆ.

ಅಮೃತಾ ರಾಮಮೂರ್ತಿ ಹಾಗೂ ರಾಘವೇಂದ್ರ ಒಟ್ಟಿಗೆ ನಟನೆಯನ್ನು ಆರಂಭಿಸಿದವರು. ‘ಮಿಸ್ಟರ್ ಆಂಡ್ ಮಿಸ್ಸಸ್ ರಂಗೇಗೌಡ’ಎಂಬ ಧಾರಾವಾಹಿಯಲ್ಲಿ ಇಬ್ಬರೂ ಪತಿ-ಪತ್ನಿ ಪಾತ್ರವನ್ನು ನಿರ್ವಹಿಸಿದ್ದರು. ಇಲ್ಲಿಂದ ಕಿರುತೆರೆ ಜರ್ನಿ ಜೊತೆಗೆ ವೈಯಕ್ತಿಕ ಜರ್ನಿಯನ್ನು ಶುರು ಮಾಡಿದ ಜೋಡಿ ಇವರದು. ಕುಲವಧು ಅಲ್ಲದೆ ಅಮೃತಾ ‘ಕಸ್ತೂರಿ ನಿವಾಸ’ ಹಾಗೂ ‘ಮನಸಾರೆ’ ಧಾರಾವಾಹಿಯಲ್ಲೂ ನಟಿಸಿದ್ದರು ಇದಾದ ಬಳಿಕ ಬ್ರೇಕ್ ತೆಗೆದುಕೊಂಡ ನಟಿ ನಟನೆಗೆ ಹಿಂತಿರುಗಿಲ್ಲ.

2019ರಲ್ಲಿ ಮದುವೆಯಾದ ಅಮೃತ ಮತ್ತು ರಾಘವೇಂದ್ರ, ಮದುವೆಯಾದ ನಂತರ ಅಮೃತಾ ಸೀರಿಯಲ್‌ನಿಂದ ದೂರ ಉಳಿದರೆ, ರಾಘವೇಂದ್ರ ಅವರು ಇನ್ನೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ‘ನಮ್ಮನೆ ಯುವರಾಣಿ’ ಧಾರಾವಾಹಿ ರಾಘವೇಂದ್ರ ಅವರಿಗೆ ಹೆಸರು ತಂದುಕೊಟ್ಟ ಸೀರಿಯಲ್.‌ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ‘ಜೀವನ ಚೈತ್ರ’, ‘ದೇವಯಾನಿ’ ಧಾರಾವಾಹಿಗಳಲ್ಲೂ ನಟಿಸಿದ್ದರು.

ಈ ಜೋಡಿ ಪುನೀತ್‌ ರಾಜ್‌ ಕುಮಾರ್‌ ಅವರ ಕಟ್ಟಾ ಅಭಿಮಾನಿ. ಕಳೆದ ವರ್ಷ ಅಮೃತಾ ರಾಮಮೂರ್ತಿ ಅವರು ತಮ್ಮ ಕನಸಿನಂತೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿಕೊಂಡಿದ್ದರು. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಮೃತಾ ಸೀಮಂತ ಸಮಾರಂಭಕ್ಕೆ ಕಿರುತೆರೆಯ ಕಲಾವಿದರು ಕೂಡ ಭಾಗಿಯಾಗಿದ್ದರು. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಳಿಕ ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಯಾಗಿರುವ ಕಾರಣ ಅವರ ಮೊದಲ ಮಗಳ ಹೆಸರನ್ನೇ ತಮ್ಮ ಮಗುವಿಗೂ ಇಟ್ಟಿದ್ದಾರೆ. ‘ಧೃತಿ ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ.

ಅಮೃತಾ ರಾಮಮೂರ್ತಿ ಸದಾ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್‌ ಆಗಿರುತ್ತಾರೆ. ಯಾವಾಗಲೂ ಯಾವುದಾದರೂ ಒಂದು ರೀಲ್‌ಗಳನ್ನು ಮಾಡುತ್ತಿರುತ್ತಾರೆ. ಅಮೃತಾ ಅವರ ಜೊತೆ ಅವರ ಪತಿ ರಾಘವೇಂದ್ರ ಅವರು ಕೂಡ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ‘777 ಚಾರ್ಲಿ’ ಸಿನಿಮಾ ನೋಡಿದ ಈ ಜೋಡಿ, ಇದರಲ್ಲಿನ ಸೀನ್‌ ಒಂದನ್ನು ರೀಲ್‌ ಮಾಡಿದ್ದಾರೆ. ಅದೇನೆಂದರೆ, ರಕ್ಷಿತ್ ಶೆಟ್ಟಿ ನಾಯಿಯನ್ನು ಪಾರ್ಕ್‌ ನಲ್ಲಿ ಬಿಟ್ಟು ಬಂದಾಗ ಪುಟ್ಟ ಹುಡುಗಿ ಅದನ್ನು ಸ್ಕೂಲ್‌ ಬ್ಯಾಗ್‌ ನಲ್ಲಿ ತಂದ ಸೀನ್.‌ ಅಮೃತಾ ಪುಟ್ಟ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಕ್ಷಿತ್‌ ಪಾತ್ರದಲ್ಲಿ ರಾಘವೇಂದ್ರ ಹಾಗೂ ಚಾರ್ಲಿ ಪಾತ್ರದಲ್ಲಿ ಮಗಳು ಧೃತಿ ಕಾಣಿಸಿಕೊಂಡಿದ್ದಾರೆ. ತುಂಬಾ ಮುದ್ದಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಇದನ್ನು ವೀಕ್ಷಿಸಿದವರೆಲ್ಲಾ ಖುಷಿಪಟ್ಟಿದ್ದಾರೆ.