• July 13, 2022

ಹಿರಿತೆರೆಯತ್ತ ಅರ್ಜುನ್ ಯೋಗಿ ಚಿತ್ತ

ಹಿರಿತೆರೆಯತ್ತ ಅರ್ಜುನ್ ಯೋಗಿ ಚಿತ್ತ

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ನಟರಲ್ಲಿ ಅರ್ಜುನ್ ಯೋಗಿ ಕೂಡ ಒಬ್ಬರು. ಜುಲೈ 15ರಂದು ತೆರೆಕಾಣಲಿರುವ ವಿಲೋಕ್ ಶೆಟ್ಟಿ ನಿರ್ದೇಶನದ ‘ಚೇಝ್’ ಸಿನಿಮಾದಲ್ಲಿ ಅರ್ಜುನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅರ್ಜುನ್ ಯೋಗಿ ”ಇದರಲ್ಲಿ ನಾನು ಪ್ಲೇಬಾಯ್ ಆಗಿರುವ ಯಶ್ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಪಕ್ಕಾ ಕ್ರಿಕೆಟ್ ಅಭಿಮಾನಿಯೊಬ್ಬನ ಪಾತ್ರ ಇದಾಗಿದ್ದು, ಆರ್‌ಸಿಬಿ ಕ್ರಿಕೆಟ್ ಟೀಮ್ ನ್ನು ಹುಚ್ಚನಂತೆ ಪ್ರೀತಿಸುವ ಈತ ಕ್ರಿಕೆಟ್ ಬೆಟ್ಟಿಂಗ್ ನಲ್ಲೂ ಭಾಗವಹಿಸುತ್ತಾನೆ. ಹೀಗೋ ಹಾಗೋ ಸಾಗುತ್ತಿದ್ದ ಅವನ ಜೀವನ ಒಂದು ಘಟನೆಯಿಂದ ತಿರುವನ್ನು ಪಡೆದುಕೊಂಡು ಅವನಲ್ಲೂ ಭಾವನೆಗಳನ್ನು ಹುಟ್ಟು ಹಾಕುತ್ತದೆ” ಎಂದಿದ್ದಾರೆ ಅರ್ಜುನ್ ಯೋಗಿ.

“ಇದಲ್ಲದೆ ಹೆಸರಾಂತ ನಟರಾಗಿರುವ ಅರವಿಂದ್ ಬೋಳಾರ್ ಅವರೊಂದಿಗೆ ಒಂದು ಹಾಡು, ಹಾಸ್ಯದೃಶ್ಯ ಇತ್ಯಾದಿಗಳಲ್ಲೂ ಅಭಿನಯಿಸಿದ್ದೇನೆ. ಇವೆಲ್ಲವನ್ನು ಒಳಗೊಂಡ ಸಮ್ಮಿಲನವೆಂಬಂತೆ ಕಥೆಯ ಗತಿ ಸಾಗುತ್ತದೆ. ಅಂತೆಯೇ ರಾಧಿಕಾ ನಾರಾಯಣ್ ಮತ್ತು ನರಸಿಂಹರಾಜು ಅವರೊಂದಿಗಿನ ಒಡನಾಟ ಒಂದು ಉತ್ತಮವಾದ ಅನುಭವವಾಗಿತ್ತು. ಈ ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ” ಎಂದರು.

ಸದ್ಯಕ್ಕಂತೂ ಅರ್ಜುನ್ ಯೋಗಿ ಪೂರ್ಣ ಪ್ರಮಾಣದಲ್ಲಿ ಸಿನಿಮಾದ ಮೇಲೆ ಚಿತ್ತವನ್ನಿಟ್ಟಿದ್ದಾರೆ. ”ಮಧ್ಯಮವರ್ಗದ ಸಾದಾ ಹುಡುಗನೊಬ್ಬ ತನ್ನ ಪ್ರೇಯಸಿಯೊಂದಿಗೆ ಲಾಂಗ್ ಡ್ರೈವ್ ಹೋಗುತ್ತಾ ಇರುವ ಗತಿಯಲ್ಲಿದ್ದ ಕತೆ ಮುಂದೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಸಾಗುವ ಸನ್ನಿವೇಶವನ್ನು ಹುಟ್ಟು ಹಾಕುತ್ತದೆ” ಎನ್ನುತ್ತಾ ಕಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಅರ್ಜುನ್ ಯೋಗಿ ‘ಇನ್ನೂ ಹಲವಾರು ಸಿನಿಮಾಗಳನ್ನು ಮಾಡುವ ಯೋಚನೆಯಿದೆ’ ಎಂದರು.