• June 27, 2022

ಕಿರುತೆರೆಯಿಂದ ಹಿರಿತೆರೆಗೆ ಲಾಂಗ್ ಡ್ರೈವ್ ಹೊರಟ ತೇಜಸ್ವಿನಿ

ಕಿರುತೆರೆಯಿಂದ ಹಿರಿತೆರೆಗೆ ಲಾಂಗ್ ಡ್ರೈವ್ ಹೊರಟ ತೇಜಸ್ವಿನಿ

ಶ್ರುತಿ ನಾಯ್ಡು ನಿರ್ದೇಶನದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಘರ್ಷ ಧಾರಾವಾಹಿಯಲ್ಲಿ ನಾಯಕಿ, ಜಿಲ್ಲಾಧಿಕಾರಿ ಇಂದಿರಾ ಆಗಿ ಅಭಿನಯಿಸಿದ್ದ ತೇಜಸ್ವಿನಿ ಶೇಖರ್ ಇದೀಗ ಲಾಂಗ್ ಡ್ರೈವ್ ಹೋಗುತ್ತಿದ್ದಾರೆ. ಅಂದ ಹಾಗೇ ತೇಜಸ್ವಿನಿ ಅವರು ಕಿರುತೆರೆಯಿಂದ ಹಿರಿತೆರೆಗೆ ಲಾಂಗ್ ಡ್ರೈವ್ ಹೋಗುತ್ತಿದ್ದಾರೆ. ‌ಅರ್ಥಾತ್ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ತೇಜಸ್ವಿನಿ “ನನ್ನ ಮೊದಲ ಸಿನಿಮಾ ಲಾಂಗ್ ಡ್ರೈವ್ ನ ಟೀಸರ್ ಇದೀಗ ರಿಲೀಸ್ ಆಗಿದೆ. ದಯವಿಟ್ಟು ನೋಡಿ ಪ್ರೋತ್ಸಾಹ ನೀಡಿ” ಎಂದು ಬರೆದುಕೊಂಡಿದ್ದಾರೆ.

ಸಾಂಸ್ಕೃತಿಕ ನಗರಿ ಎಂದೇ ಜನಪ್ರಿಯವಾಗಿರುವ ಮೈಸೂರು ನಲ್ಲಿ ತೇಜಸ್ವಿನಿ ಹುಟ್ಟಿ ಬೆಳೆದಿದ್ದರೂ ನಟಿಯಾಗಬೇಕು ಎಂಬ ಕನಸು ಕಂಡವರಲ್ಲ! ಬದಲಿಗೆ ಆಕೆ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಆಚಾನಕ್ ಆಗಿ. ಫೇಸ್ ಬುಕ್ ನಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿದ್ದ ತೇಜಸ್ವಿನಿ ಶೇಖರ್ ಫೋಟೋವನ್ನು ನೋಡಿದ ನಿರ್ದೇಶಕರೊಬ್ಬರು ನಟಿಸುತ್ತೀರಾ ಎಂದು ಕೇಳಿದರು.ಅದುವೇ ಆಕೆಯ ನಟನಾ ಬದುಕಿಗೆ ಮುನ್ನುಡಿ ಬರೆಯಿತು.

ಕಲರ್ಸ್ ಕನ್ನಡ ವಾಹಿನಿಯ ಸೌಭಾಗ್ಯವತಿ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ತೇಜಸ್ವಿನಿ ಶೇಖರ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಅನ್ನಿ. ಮುಂದೆ ಮಧುಬಾಲಾ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡಿ ಸೈ ಎನಿಸಿಕೊಂಡ ಈಕೆ ಮುಂದೆ ಮಹಾನದಿಯ ಮೇಘನಾ ಆಗಿ ಬದಲಾದರು. ಮಾತ್ರವಲ್ಲ ಆ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ಕೂಡಾ ತಂದುಕೊಟ್ಟಿತ್ತು. ಎಲ್ಲಿ ಹೋದರೂ ಜನ ಆಕೆಯನ್ನು ಮೇಘನಾ ಎಂದೇ ಗುರುತಿಸುತ್ತಿದ್ದರು.

ನಂತರ ನೀಲಿ ಧಾರಾವಾಹಿಯಲ್ಲಿ ನಾಯಕಿ ರೇಖಾಳಾಗಿ ಅಭಿನಯಿಸಿದ್ದ ತೇಜಸ್ವಿನಿ ಅಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡರು. ಮೊದಲ ಬಾರಿಗೆ ನೆಗೆಟಿವ್ ರೋಲ್ ಮಾಡಿದ್ದರೂ ಪ್ರೇಕ್ಷಕರ ಮನ ಸೆಳೆಯುವಲ್ಲಿ ಆಕೆ ಯಶಸ್ವಿ ಆದರು. ನೀಲಿ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಆಕೆ ಇಂದಿರಾ ಆಗಿ ಕಿರುತೆರೆಗೆ ಮರಳಿದ್ದು ಅವರ ಕಂ ಬ್ಯಾಕ್ ವೀಕ್ಷಕರಿಗೆ ಸಂತಸ ನೀಡಿತ್ತು. ಇದೀಗ ಹಿರಿತೆರೆಗೆ ಹಾರಿದ್ದು ಅಲ್ಲಿ ಗೆಲುವು ಸಾಧಿಸುತ್ತಾರಾ ಎಂದು ನೋಡಬೇಕಾಗಿದೆ.