• March 22, 2022

ಭಾವುಕ ಪತ್ರ ಹಂಚಿಕೊಂಡ ಸಹನಾ ಅಪ್ಪಣ್ಣ ಹೇಳಿದ್ದೇನು ಗೊತ್ತಾ?

ಭಾವುಕ ಪತ್ರ ಹಂಚಿಕೊಂಡ ಸಹನಾ ಅಪ್ಪಣ್ಣ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯು ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತಿ ಹೆಚ್ಚು ಟಿ ಆರ್ ಪಿ ಯನ್ನು ಪಡೆಯುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇರುವುದು ತುಂಬಾ ವಿಶೇಷ.

ಇಂತಿಪ್ಪ ಕನ್ಯಾಕುಮಾರಿಯಲ್ಲಿ ನಾಯಕ ಚರಣ್ ಅಕ್ಕ ಭಾಗ್ಯಲಕ್ಷ್ಮಿಯಾಗಿ ಅಭಿನಯಿಸುತ್ತಿರುವ ಸಹನಾ ಅಪ್ಪಣ್ಣ ಇದೀಗ ತಮ್ಮ ಪಾತ್ರಕ್ಕೆ ವಿದಾಯ ಹೇಳಲಿದ್ದಾರೆ. ಹೌದು, ಕಾರಣಾಂತರಗಳಿಂದ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರಬಂದಿರುವ ಸಹನಾ ಅಪ್ಪಣ್ಣ ಭಾವುಕ ಪತ್ರವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

“ಭಾಗ್ಯ ಲಕ್ಷ್ಮಿ ಪಾತ್ರಕ್ಕೆ ತೆರೆ ಎಳೆಯುವ ಸಮಯ. ನೀವೆಲ್ಲರೂ ಭಾಗ್ಯ ಲಕ್ಷ್ಮಿ ಪಾತ್ರಕ್ಕೆ, ನನಗೆ ನೀಡಿದ ಪ್ರೀತಿ ಪ್ರೋತ್ಸಾಹಕ್ಕೆ ನಾನೆಷ್ಟು ಧನ್ಯವಾದಗಳನ್ನು ಹೇಳಿದರೂ ಅದು ಕಡಿಮೆಯೇ. ಆದರೆ ಇದೀಗ ನಾನು ಆ ಪಾತ್ರಕ್ಕೆ ವಿದಾಯ ಹೇಳಲಿದ್ದೇನೆ. ಇನ್ನು ಮುಂದೆ ನಾನು ಭಾಗ್ಯಲಕ್ಷ್ಮಿಯಾಗಿ ನಟಿಸುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ ಸಹನಾ ಅಪ್ಪಣ್ಣ.

“ಕನ್ಯಾಕುಮಾರಿ ಧಾರಾವಾಹಿಯನ್ನು ನಾನು ಯಾಕೆ ಅರ್ಧದಲ್ಲಿಯೇ ಬಿಡುತ್ತಿದ್ದೇನೆ ಎನ್ನುವುದಕ್ಕೆ ಕಾರಣವನ್ನು ನನ್ನ ಧಾರಾವಾಹಿ ತಂಡಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ತಿಳಿಸಿದ್ದೇನೆ. ಭಾಗ್ಯಲಕ್ಷ್ಮಿ ಪಾತ್ರವನ್ನು ತುಂಬ ಸೊಗಸಾಗಿ ನಿಮ್ಮ ಮುಂದೆ ತಂದಿರುವ
ರಘು ಚರಣ್ ಅವರಿಗೆ ಧನ್ಯವಾದಗಳು” ಎಂದಿದ್ದಾರೆ ಸಹನಾ ಅಪ್ಪಣ್ಣ.

ಇದರ ಜೊತೆಗೆ “ನಾನು ಜೋಗಿ ಹಟ್ಟಿ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೀನಿ. ಅನೇಕ ವಿಚಾರಗಳನ್ನು ಕಲಿಸಿರುವಂತಹ ಪ್ರದೀಪ್‌ ತಿಪಟೂರು ಅವರಿಗೂ ಧನ್ಯವಾದಗಳು. ಇನ್ನು ನೀವು ನಿಮ್ಮ ಸಂಸ್ಥೆಯಿಂದ ಅನೇಕರಿಗೆ ವಿದ್ಯೆ ಹಂಚುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇನ್ನು ನಾನು ಇಡೀ ಧಾರಾವಾಹಿ ತಂಡದವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿರುವ ಸಹನಾ ಅಪ್ಪಣ್ಣ ಮತ್ತೆ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಾರಾ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಗಬೇಕಿದೆ.