• February 19, 2022

ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ – ಮಾನ್ಸಿ ಜೋಷಿ

ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ – ಮಾನ್ಸಿ ಜೋಷಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಪಾರು ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ತಾರಾಗಣದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಪಾರು ಧಾರಾವಾಹಿ. ಪಾರು ಧಾರಾವಾಹಿಯಲ್ಲಿ ಖಳನಾಯಕಿ ಅನುಷ್ಕಾ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಚೆಲುವೆ ಮಾನ್ಸಿ ಜೋಷಿ ಖಳನಾಯಕಿಯಾಗಿಯೇ ಕಿರುತೆರೆಯಲ್ಲಿ ಅಬ್ಬರಿಸಿದ್ದೇ ಹೆಚ್ಚು!

ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಮಾನ್ಸಿ ಜೋಷಿ ಇದೇ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಅಣ್ಣ ತಂಗಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಹೌದು, ಪಾರು ಧಾರಾವಾಹಿಯ ಅನುಷ್ಕಾ ಪಾತ್ರ ಕೊನೆಗೊಂಡ ನಂತರ ಬರೋಬ್ಬರಿ ಆರು ತಿಂಗಳುಗಳ ಕಾಲ ಮಾನ್ಸಿ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಕಿರುತೆರೆಯತ್ತ ಮುಖ ಮಾಡಿರುವ ಮಾನ್ಸಿ ಜಿಲ್ಲಾಧಿಕಾರಿಯಾಗಿ ಮೋಡಿ ಮಾಡುತ್ತಿದ್ದಾರೆ.

“ಖಳನಾಯಕಿಯಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ನಾನು ಖಳನಾಯಕಿಯಾಗಿ ಅಬ್ಬರಿಸಿದ್ದೇ ಹೆಚ್ಚು! ವಿಲನ್ ಪಾತ್ರಗಳಿಗೆ ಸೀಮಿತವಾದ ನಾನು ಇದೇ ಮೊದಲ ಬಾರಿ ಪಾಸಿಟಿವ್ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದೇನೆ. ಭಿನ್ನ ಪಾತ್ರದ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ” ಎಂದು ಹೇಳುತ್ತಾರೆ ಮಾನ್ಸಿ ಜೋಷಿ.

ಇನ್ನು ಪಾತ್ರದ ಬಗ್ಗೆ ಹೇಳಿರುವ ಮಾನ್ಸಿ ಜೋಷಿ “ನಾನು ಅಣ್ಣ ತಂಗಿ ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದೇನೆ. ಹಳ್ಳಿಯೊಂದರ ಜಿಲ್ಲಾಧಿಕಾರಿಯಾಗಿರುವ ನಾನು ಹಳ್ಳಿಯ ಅಭಿವೃದ್ಧಿಗಾಗಿ, ಜನರ ಒಳಿತಿಗಾಗಿ ಸದಾ ಕಾಲ ಶ್ರಮವಿಟ್ಟು ಕಾರ್ಯ ನಿರ್ವಹಿಸುತ್ತಿರುತ್ತೇನೆ” ಎನ್ನುತ್ತಾರೆ.

ಸ್ಟಾರ್ ಸುವರ್ಣ ವಾಹಿನಿಯ ಬಿಳಿಹೆಂಡ್ತಿಯ ರಮ್ಯಾ ಆಗಿ ನಟನಾ ಪಯಣ ಶುರು ಮಾಡಿದ ಮಾನ್ಸಿ ಮುಂದೆ ರಾಧಾ ರಮಣದ ಅನ್ವಿತಾ, ನಾಯಕಿ ಧಾರಾವಾಹಿಯ ಪ್ರಿಯಾಂಕಾ, ಪಾರು ಧಾರಾವಾಹಿಯ ಅನುಷ್ಕಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಮಾನ್ಸಿ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ ಚೆಲುವೆ. ತಮಿಳಿನ ಅನುಬುಡನ್ ಖುಷಿಯಲ್ಲಿ ನಾಯಕಿ ಖುಷಿಯಾಗಿ ನಟಿಸುತ್ತಿರುವ ಈಕೆ ಪ್ರಸ್ತುತ ತೆಲುಗಿನ ದೇವತಾ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.