• March 19, 2022

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕಿ ಕನ್ನಿಕಾ ಆಗಿ ನಟಿಸುತ್ತಿರುವ ಆಸಿಯಾ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಮಹಾನಗರಿಯ ಬೆಡಗಿ ಆಸಿಯಾ ಸದ್ಯ ಕನ್ನಿಮಾ ಆಗಿ ಕಿರುತೆರೆಯಲ್ಲಿ ಸಕತ್ ಬ್ಯುಸಿ.

ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೊಂಚ ಜಾಸ್ತಿಯೇ ಆ್ಯಕ್ಟೀವ್ ಆಗಿರುತ್ತಿದ್ದ ಆಸಿಯಾ ತದ ನಂತರ ಆಯ್ದುಕೊಂಡಿದ್ದು ಮಾಡೆಲಿಂಗ್ ಕ್ಷೇತ್ರವನ್ನು. ಮುಂದೆ ಒಂದಷ್ಟು ಶೋ ಗಳಲ್ಲಿ ಕ್ಯಾಟ್ ವಾಕ್ ಮಾಡಿ ಸೈ ಎನಿಸಿಕೊಂಡಿದ್ದ ಆಸಿಯಾ ಮಾಡೆಲಿಂಗ್ ಲೋಕದ ಆಳ ಅಗಲಗಳನ್ನು ತಿಳಿದುಕೊಂಡರು. ಮನಸ್ಸು ನಟನೆಯತ್ತ ವಾಲಿದ ಕಾರಣ ನಟಿಯಾಗಬೇಕು ಎಂಬ ದೃಢಸಂಕಲ್ಪ ಮಾಡಿದ ಆಸಿಯಾ ನಟನಾ ತರಬೇತಿ ಪಡೆಯುವ ನಿರ್ಧಾರ ಮಾಡಿದರು.

ಉಷಾ ಭಂಡಾರಿ ಅವರ ಆ್ಯಪ್ ಸಂಸ್ಥೆ ಸೇರಿದ ಆಸಿಯಾ ಮೂರು ತಿಂಗಳುಗಳ ಕಾಲ ತರಬೇತಿಯನ್ನು ಕೂಡಾ ಪಡೆದರು. ನಂತರ ಒಂದಷ್ಟು ಆಡಿಶನ್ ಗಳಿಗೆ ಹೋದ ಆಸಿಯಾ ಆಯ್ಕೆಯಾಗಲಿಲ್ಲ. ನನಗೂ ನಟನೆಗೂ ಹೊಂದಾಣಿಕೆಯಾಗುವುದಿಲ್ಲ, ನಟನಾ ಲೋಕದಲ್ಲಿ ಮಿಂಚುವುದು ಅಸಾಧ್ಯ ಎಂದ ಅರಿತುಕೊಂಡ ಆಸಿಯಾ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿದರು.

ಅದೇ ಸಮಯದಲ್ಲಿ ಆಡಿಶನ್ ನಲ್ಲಿ ಭಾಗವಹಿಸುವಂತೆ ಕರೆ ಬಂದಿತ್ತು. ಕನ್ಯಾಕುಮಾರಿ ಧಾರಾವಾಹಿಯ ನಿರ್ದೇಶಕ ಆಸಿಯಾ ಅವರಿಗೆ ಕರೆ ಮಾಡಿ ಆಡಿಶನ್ ನಲ್ಲಿ ಭಾಗವಹಿಸುವಂತೆ ಹೇಳಿದರು. ಆ ಸಮಯಕ್ಕೆ ಸರಿಯಾಗಿ ಅದೃಷ್ಟ ದೇವತೆಯೂ ಆಕೆಯ ಕೈ ಹಿಡಿದಿದ್ದರು. ಆಡಿಶನ್ ಗೆ ಹೋದ ಆಕೆ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು.
ಜೊತೆಗೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಆಸಿಯಾ ಬಹು ದಿನದ ಕನಸು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ.