• April 28, 2022

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

ಕೆಜಿಎಫ್ ಒಂದು ಸಿನಿಮಾವಾಗಿ ಉಳಿದಿಲ್ಲ, ಬದಲಾಗಿ ಅದು ಎಷ್ಟೋ ಪ್ರೇಕ್ಷಕರ ಜೀವನದ ಒಂದು ಭಾಗವಾಗಿ ಸೇರಿಕೊಂಡಿದೆ. ಅದರಲ್ಲಿ ಬರೋ ಪಾತ್ರಗಳು ಅಷ್ಟೇ. ಅಭಿಮಾನಿಗಳೆಲ್ಲರ ಮನದಲ್ಲಿ ಮನೆಮಾಡಿ ಕುಳಿತಿದ್ದಾರೆ ಇಲ್ಲಿನ ರಾಕಿ ಭಾಯ್, ಅಧೀರ, ಗರುಡ, ರಮಿಕ ಸೇನ್ ಮುಂತಾದವರು. ಅದರಲ್ಲೂ ರಾಕಿ ಭಾಯ್ ಯುವಪೀಳಿಗೆಗೆ ಆರಾಧ್ಯ ದೈವವಾದಂತಾಗಿದೆ. ಇಂತಹ ಅಭಿಮಾನವೊಂದು ಒಬ್ಬ ಪುಟ್ಟ ಹುಡುಗನಲ್ಲಿ ಕಾಣಸಿಕ್ಕಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಬಿಡುಗಡೆ ಕಂಡಿದೆ. ಪ್ರಪಂಚದಾದ್ಯಂತ ಹಲವರು, ಹಲವು ಕುಟುಂಬಗಳು ಚಿತ್ರಮಂದಿರದೆಡೆಗೆ ಓಡಿ ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಇಂತಹದೆ ಒಂದು ಕುಟುಂಬದ ಮುಗ್ಧ ಮಗುವೊಂದು ಕೆಜಿಎಫ್ ನ ಎರಡನೇ ಅಧ್ಯಾಯವನ್ನ ನೋಡಿಬಂದು ರಾಕಿ ಭಾಯ್ ಅನ್ನ ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದಾನೆ. ಚಿತ್ರವನ್ನ ನೋಡಿದ ದಿನದಿಂದ ರಾಕಿ ಭಾಯ್ ಜಪವನ್ನೇ ಮಾಡುತ್ತಿದ್ದಾನಂತೆ ಈ ಕಂದಮ್ಮ. ಹೀಗೆ ಹೇಳುತ್ತಿರೋ ವಿಡಿಯೋ ಒಂದನ್ನ ಮನೆಯವರು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. “ಯಶ್ ಅವರೇ, ಈ ಮಗು ರಾಕಿ ಭಾಯ್ ಅನ್ನು ಭೇಟಿಯಾಗಬೇಕಂತೆ. ಚಿತ್ರ ನೋಡಿದಾಗಿನಿಂದ ಇದನ್ನೇ ಹೇಳುತ್ತಿದ್ದಾನೆ. ರಾಕಿ ಭಾಯ್ ನ ನೋಡಲೇ ಬೇಕು ಎಂದು ಬೇಜಾರಿನಲ್ಲಿ ಕೂತಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

ವಿಶೇಷವೆಂದರೆ, ಈ ವಿಡಿಯೋ ನಮ್ಮ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅವರನ್ನ ಕೂಡ ತಲುಪಿದೆ. ಟ್ವಿಟರ್ ನಲ್ಲಿ ಯಶ್ ಅವರನ್ನ ಟ್ಯಾಗ್ ಮಾಡಿ ಹಾಕಲಾಗಿದ್ದ ಈ ವಿಡಿಯೋವನ್ನ ಯಶ್ ನೋಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. “ಆರಾಮಾಗಿರು ಕಂದ, ನಿನ್ನ ರಾಕಿ ಭಾಯ್ ನೋಡುತ್ತಿದ್ದಾನೆ. ಖುಷಿಯಾಗಿರು. ನಂಗೆ ಬೇಜಾರು ಇಷ್ಟವಾಗಲ್ಲ” ಎಂದು ಟ್ವೀಟ್ ಮಾಡಿದ್ದಾರೆ ರಾಕಿಂಗ್ ಸ್ಟಾರ್.

ಯಶ್, ಸಂಜಯ್ ದತ್, ರವೀನ ಟಂಡನ್, ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿರೋ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ಸದ್ಯ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗು ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಸದ್ಯ ಪ್ರಪಂಚದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಒಟ್ಟುಮಾಡುವ ಭರದಲ್ಲಿ ಸಾಗುತ್ತಿದೆ.