• January 30, 2022

ನವರಸ ನಾಯಕನಿಗೆ ಜೋಡಿಯಾಗಲಿದ್ದಾರೆ “ಸಿಂಪಲ್” ಸುಂದರಿ

ನವರಸ ನಾಯಕನಿಗೆ ಜೋಡಿಯಾಗಲಿದ್ದಾರೆ “ಸಿಂಪಲ್” ಸುಂದರಿ

ಸಿನಿಮಾರಂಗದಲ್ಲಿ ಮದುವೆಯಾಗಿ ತಾಯಿಯಾದ ಬಳಿಕ ನಟನೆಯಿಂದ ದೂರ ಉಳಿಯುವವರೇ ಹೆಚ್ಚು. ಅಂತಹುದರಲ್ಲಿ ತಾಯಿಯಾದ ಬಳಿಕ ನಟನೆಯಿಂದ ಸಹಜವಾಗಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ಸಿಂಪಲ್ ಸುಂದರಿ ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹೌದು ನಾಲ್ಕು ವರ್ಷದ ಮಗಳಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಶ್ವೇತಾ ನಟನೆಗೆ ಮರಳುವ ಮನಸ್ಸು ಮಾಡಿದ್ದಾರೆ. ರಹದಾರಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ಸಿನಿರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದ ಶ್ವೇತಾ ಹೋಮ್ ಮಿನಿಸ್ಟರ್ ಎಂಬ ಸಿನಿಮಾ ಮೂಲಕ ಸುದ್ದಿ ಮಾಡಿದ್ದರು.

ಇದೀಗ ಮಗದೊಂದು ಸಿನಿಮಾವನ್ನು ಒಪ್ಪಿಕೊಂಡಿರುವ ಸಿಂಪಲ್ ಸುಂದರಿ ನವರಸ ನಾಯಕನಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್ಸ್”ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಶ್ವೇತಾ.

“ಸಂತೋಷ್ ಅವರು ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಕಥೆ ಹೇಳಿದಾಗ ನನಗೆ ತುಂಬಾನೇ ಖುಷಿಯಾಯಿತು. ಬಹಳ ಒಳ್ಳೆಯ ಪಾತ್ರ ಆಗಿದ್ದ ಕಾರಣ ನಾನು ತಡಮಾಡದೇ ಒಪ್ಪಿಕೊಂಡೆ. ಈಗಾಗಲೇ ಎರಡು ಶೆಡ್ಯೂಲ್ ಗಳ ಶೂಟಿಂಗ್ ಮುಗಿದಿದೆ. ಇನ್ನು ನನಗೆ ಈ ಸಿನಿಮಾದಲ್ಲಿ ನಟಿಸುವ ಆಫರ್ ದೊರೆತಾಗ ನಿಜಕ್ಕೂ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು. ದೊಡ್ಡ ನಿರ್ದೇಶಕರು ಜೊತೆಗೆ ದೊಡ್ಡ ನಟರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ರಾಘವೇಂದ್ರ ಸ್ಟೋರ್ಸ್ ಪಕ್ಕಾ ಕಮರ್ಷಿಯಲ್ ಎಂಟರ್ ಟೇನರ್ ಚಿತ್ರ”ಎಂದಿದ್ದಾರೆ ಶ್ವೇತಾ.

ರಂಗಭೂಮಿ ಹಿನ್ನೆಲೆಯಿಂದ ಬಂದ ಶ್ವೇತಾ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಮುಖಾಮುಖಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಈಕೆ ಮುಂದೆ
ಸೈಬರ್ ಯುಗದೊಳ್ ನವ ಯುಗ ಪ್ರೇಮ ಕಾವ್ಯಂ, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಫೇರ್ ಆ್ಯಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಲ್ಲಿ ಅಭಿನಯಿಸಿದ್ದರು.