• March 12, 2022

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ

ಚಂದನವನದ ಸಿಂಪಲ್ ತಾರೆ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಶ್ವೇತಾ ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕಿಯ ಮೂಗುತಿ ಎಂಬ ಹೊಸ ಸಿನಿಮಾದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿದ್ದು ಗ್ರಾಮೀಣ ಸೊಗಡನ್ನು ಹೊಂದಿದೆ.

“ಈ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದೆ. ಏಕೆಂದರೆ ಇದು ಸಮಾಜದಲ್ಲಿ ಇನ್ನು ಪ್ರಚಲಿತದಲ್ಲಿ ಇರುವ ಸಮಸ್ಯೆಗಳ ಕುರಿತಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಶಿಶು ಹತ್ಯೆ ಹಾಗೂ ಬಾಲ್ಯ ವಿವಾಹವನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ದೇವಿಕಾ ಜನಿತ್ರಿ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಸ್ವತಃ ಅವರೇ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಸಿನಿಮಾ ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದು ಯಾವುದೇ ಅಸಹ್ಯಕರವಾಗಿರುವುದಿಲ್ಲ. ಅದ್ದೂರಿಯಾಗಿ ನಿರ್ಮಿಸಲಾಗುವುದು” ಎಂದಿದ್ದಾರೆ.

ಚಿತ್ರದ ಕಥೆಯನ್ನು ಬಿಟ್ಟು ಚಿತ್ರತಂಡ ಅವರ ಮೇಲೆ ಇಟ್ಟಿರುವ ನಂಬಿಕೆಗೆ ಮನಸೋತಿದ್ದಾರೆ. “ಚಿತ್ರ ತಂಡ ನನ್ನನ್ನೇ ಚಿತ್ರಕ್ಕೆ ಆಯ್ಕೆ ಮಾಡಿತ್ತು. ನನಗೆ ಡೇಟ್ ಸಮಸ್ಯೆಗಳು ಇದ್ದವು. ಬೇರೆಯವರನ್ನು ಹಾಕಿಕೊಳ್ಳಲು ಹೇಳಿದ್ದೆ. ಆದರೆ ಅವರು ನಿರಾಕರಿಸಿದರು. ನಾನೇ ಅವರ ಆದ್ಯತೆ ಎಂದು ಗೊತ್ತಾಯಿತು. ನಾನು ಅದರ ಭಾಗವಾಗದಿದ್ದರೆ ಅವರು ಚಿತ್ರ ಮಾಡದಿರಬಹುದು. ಅವರ ನಂಬಿಕೆ ನನ್ನ ಮನತಟ್ಟಿತು. ನಾನು ತಕ್ಷಣವೇ ಈ ಸಿನಿಮಾಕ್ಕೆ ಒಪ್ಪಿಗೆ ನೀಡಿದೆ” ಎಂದಿದ್ದಾರೆ.

ಶ್ವೇತಾ ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದು ಅವುಗಳಲ್ಲಿ ನಾಯಕಿ ಪಾತ್ರಗಳು ಪ್ರಾಧಾನ್ಯತೆ ಹೊಂದಿವೆ. “ನಮ್ಮಲ್ಲಿ ಕೆಲವೇ ಕೆಲವು ಮಹಿಳಾ ಆಧಾರಿತ ವಿಷಯಗಳಿವೆ. ಇದು ನಮಗೆ ಹೆಚ್ಚು ಅಗತ್ಯವಿದೆ. ಮುಖ್ಯ ವಾಹಿನಿಯ ಸಿನಿಮಾಗಳಲ್ಲಿ ಇವು ನೈತಿಕ ಕಥೆಗಳಾಗಬೇಕು. ಮಹಿಳಾ ಆಧಾರಿತ ಸಬ್ಜೆಕ್ಟ್ ಕೇವಲ ಕಲಾತ್ಮಕ ಸಿನಿಮಾ ಎಂಬ ವ್ಯತ್ಯಾಸ ಹೋಗಬೇಕಿದೆ. ಇಲ್ಲಿ ಜನರು ಯಾವುದೇ ಲಿಂಗವನ್ನು ಕೇಂದ್ರಿಕರಿಸದೆಯೇ ನಾಯಕನನ್ನು ನೋಡಬೇಕು.ಯಾವುದೇ ಪಕ್ಷಪಾತವಿಲ್ಲದೆ ಕಥೆ ಹಾಗೂ ಪಾತ್ರದ ಮೇಲೆ ಕೇಂದ್ರೀಕರಿಸುವ ಸಮಯವನ್ನು ನಾನು ಬಯಸುತ್ತೇನೆ. ಸಮಾಜವು ಇದನ್ನು ಒಪ್ಪಿಕೊಂಡಾಗ ಇದು ಸಂಭವಿಸುತ್ತದೆ. ಎಲ್ಲಾ ಸ್ತ್ರೀ ಕಲಾವಿದರು ಇದನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.” ಎಂದಿದ್ದಾರೆ.

“ಈ ಆಲೋಚನೆಯ ನಿರ್ಮಾಪಕ ಹಾಗೂ ಬರಹಗಾರರು ಅಗತ್ಯವಿದೆ. ತಾಯಂದಿರಾದ ಹೆಚ್ಚಿನ ಕಲಾವಿದರು ಈಗ ಸೆಟ್ ನಲ್ಲಿ ಕಂಫರ್ಟೇಬಲ್ ಆಗಿರುವುದು ಖುಷಿಯ ಸಂಗತಿ. ಇದು ಎಲ್ಲ ಭಾಷೆಯ ಇಂಡಸ್ಟ್ರಿಯಲ್ಲಿ ಕಂಡು ಬರುತ್ತಿದೆ. ಕನ್ನಡದಲ್ಲಿ ಮೊದಲು ನಟಿಯರು ಮಕ್ಕಳಾದ ಮೇಲೆ ಪ್ರಮುಖ ಪಾತ್ರದಲ್ಲಿ ನಟಿಸುವುದು ಕಾಣುತ್ತಿರಲಿಲ್ಲ. ಈಗ ನಾವು ಈ ಬದಲಾವಣೆಯನ್ನು ಸ್ವೀಕರಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ.” ಎಂದಿದ್ದಾರೆ ಶ್ವೇತಾ.