• March 21, 2022

ಕಿರುತೆರೆ,ಹಿರಿತೆರೆ ನಡುವೆ ವ್ಯತ್ಯಾಸ ಅನುಭವಿಸಿಲ್ಲ – ಶ್ರುತಿ ಹರಿಹರನ್

ಕಿರುತೆರೆ,ಹಿರಿತೆರೆ ನಡುವೆ ವ್ಯತ್ಯಾಸ ಅನುಭವಿಸಿಲ್ಲ – ಶ್ರುತಿ ಹರಿಹರನ್

ಹಿರಿತೆರೆ ನಟಿ ಶ್ರುತಿ ಹರಿಹರನ್ ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ಶ್ರುತಿ ಹರಿಹರನ್ ಈಗ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ‌‌. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ “ಕಾಮಿಡಿ ಗ್ಯಾಂಗ್ ಶೋ” ವಿನ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್ ಕೆಆರ್ ಪೇಟೆ ನಿರೂಪಣೆ ಹೊಂದಿರುವ ಈ ಶೋನಲ್ಲಿ ಕುರಿ ಪ್ರತಾಪ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರೂ ಕೂಡಾ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

“ಮತ್ತೆ ಕಿರುತೆರೆಗೆ ಮರಳುತ್ತಿದ್ದೇನೆ. ತುಂಬಾ ಖುಷಿಯಾಗಿದ್ದೇನೆ. ಈ ಶೋನಲ್ಲಿ ಆರು ತಂಡಗಳು ಸ್ಪರ್ಧಿಸುತ್ತಿವೆ. ಕಾರ್ಯಕ್ರಮದ ಸಾರ ಹಾಸ್ಯವಾಗಿದ್ದರೂ ಅದು ಹಾಸ್ಯವನ್ನು ಮೀರಿಸುತ್ತದೆ. ಇದು ಸೂಕ್ತವಾದ ಹಾಗೂ ಸಂಬಂಧಿತ ವಿಷಯಗಳನ್ನು ತರುವ ಭರವಸೆ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ” ಎನ್ನುತ್ತಾರೆ.

ಈ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಶ್ರುತಿ ಈಗ ವಿಭಿನ್ನ ಶೋ ಮಾಡುತ್ತಿದ್ದಾರೆ. “ನಾನು ಈ ಕಾರ್ಯಕ್ರಮದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲದೇ ಪರ್ಫಾಮರ್ ಆಗಿಯೂ ಗುರುತಿಸಿಕೊಳ್ಳಲಿದ್ದೇನೆ. ಈ ಶೋ ಭಾವನೆಗಳ ಮೂಲಕ ವ್ಯಕ್ತಪಡಿಸಿಕೊಳ್ಳುವುದಾಗಿದೆ. ಇದು ನನಗೆ ಕನೆಕ್ಷನ್ ಇದೆ ಎಂದೆನಿಸುತ್ತದೆ” ಎಂದಿದ್ದಾರೆ.

“ಕಿರುತೆರೆ ಹಾಗೂ ಹಿರಿತೆರೆಯ ನಡುವಿನ ವ್ಯತ್ಯಾಸವನ್ನು ನಾನು ಎಂದಿಗೂ ಅನುಭವಿಸಲಿಲ್ಲ. ಈ ವ್ಯತ್ಯಾಸ ಇಂದು ಇಲ್ಲ. ಕಿರುತೆರೆಯಲ್ಲಿ ನನ್ನ ಹಿಂದಿನ ಅನುಭವ ಹೇಳುವುದಾದರೆ ಜನರಿಂದ ಪ್ರೀತಿ ಹಾಗೂ ಪ್ರೋತ್ಸಾಹ ಸಿಕ್ಕಿದೆ. ಅವರು ನಿಮ್ಮನ್ನು ಅವರ ಮನೆಗಳಲ್ಲಿ ನೋಡುತ್ತಾರೆ ಎಂಬ ಅಂಶವು ಅವರನ್ನು ನಿಮ್ಮ ಹತ್ತಿರಕ್ಕೆ ಸೆಳೆಯುತ್ತದೆ. ಇದು ನಿಮ್ಮ ಚಿತ್ರ ಬಿಡುಗಡೆ ಆದಾಗ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅವರು ನಿಮ್ಮನ್ನು ಬಹಳ ತಿಳಿದಿರುವ ವ್ಯಕ್ತಿಯಂತೆ ನೋಡುತ್ತಾರೆ” ಎಂದಿದ್ದಾರೆ.

ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ಶ್ರುತಿ ಹರಿಹರನ್ ಸದ್ಯ ಸ್ಟ್ರಾಬೆರಿ , ಹೆಡ್ ಬುಷ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.