- May 21, 2022
ತೆರೆಯ ಕಡೆಗೆ ಬರುತ್ತಿದೆ ‘ಕೆಜಿಎಫ್’ ರಾಣಿಯ ಮುಂದಿನ ಚಿತ್ರ.


ಕೆಜಿಎಫ್ ಚಾಪ್ಟರ್ 2 ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಸಾವಿರ ಮನಸ್ಸುಗಳ ಜೊತೆಗೆ ಸಾವಿರ ಕೋಟಿಯನ್ನೂ ದಾಟಿ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಭಾಗವಾಗಿದ್ದ ಪ್ರತಿಯೊಬ್ಬರಿಗೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದಂತು ಸತ್ಯ. ಇದೀಗ ಕೆಜಿಎಫ್ ನ ರಾಣಿ, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರ ಮುಂದಿನ ಚಿತ್ರದ ಬಿಡುಗಡೆಗೆ ಮುಹೂರ್ತ ಇಡಲಾಗಿದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದ ನಂತರ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿದ್ದು ಸಹ ಅಷ್ಟೇ ದೊಡ್ಡ ಸಿನಿಮಾ. ತಮಿಳಿನ ಸ್ಟಾರ್ ನಟನ ಜೊತೆ ಬಣ್ಣ ಹಚ್ಚಿದ್ದಾರೆ ರೀನಾ.




ಹೌದು, ತಮಿಳು ಚಿತ್ರರಂಗವನ್ನ ದಶಕಗಳಿಂದ ಆಳುತ್ತಿರುವ ದಿಗ್ಗಜ ನಟರಾದ ಚಿಯಾನ್ ವಿಕ್ರಮ್ ಅವರ ಮುಂದಿನ ಚಿತ್ರ ‘ಕೋಬ್ರಾ’ ದಲ್ಲಿ ನಟಿಸುತ್ತಿದ್ದಾರೆ ಶ್ರೀನಿಧಿ ಶೆಟ್ಟಿ. ‘7 ಸ್ಕ್ರೀನ್ ಸ್ಟುಡಿಯೋಸ್’ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಈ ಸಿನಿಮಾವನ್ನು ಆರ್ ಅಜಯ್ ಜ್ಞಾನಮುತು ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸುಮಾರು 20 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ವಿಕ್ರಮ್. ಸುಮಾರು ಒಂದು ವರ್ಷಗಳ ಹಿಂದೆಯೇ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಪ್ರೀತಿಪಾತ್ರವಾಗಿತ್ತು ಈ ವಿಭಿನ್ನ ಟೀಸರ್. ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಹೊರಹಾಕಿದೆ ಚಿತ್ರತಂಡ. ಇದೇ ಆಗಸ್ಟ್ 11ರಂದು ‘ಕೋಬ್ರಾ’ ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ. ಈ ಬಗ್ಗೆ ಚಿತ್ರದ ಪ್ರಮುಖರು ತಮ್ಮ ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.






ಚಿಯಾನ್ ವಿಕ್ರಮ್ ಅವರು ನಾಯಕರಾಗಿ ನಟಿಸಿರೋ ‘ಕೋಬ್ರಾ’ ದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಅವರ ಜೊತೆಗೆ, ಪ್ರಿಯಾ ಭವಾನಿ ಶಂಕರ್, ರೋಷನ್ ಮಾತಿವ್, ಕನಿಹ, ಮಮ್ಮುಕೋಯಾ, ಮುಂತಾದವರು ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಟಾನ್ ಅವರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನ ನಿರ್ವಹಿಸುತ್ತಿದ್ದಾರೆ. ಎ ಆರ್ ರಹಮಾನ್ ಅವರ ಸಂಗೀತ ಚಿತ್ರದಲ್ಲಿರಲಿದ್ದು, ಈಗಾಗಲೇ ಬಿಡುಗಡೆಯಗಿರುವ ಹಾಡುಗಳು ಜನರ ಮನಗೆದ್ದಿವೆ. ಆಗಸ್ಟ್ 11ರಂದು ‘ಕೋಬ್ರಾ’ ಚಿತ್ರ ತಮಿಳು ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವುದು ಖಾತ್ರಿಯಾಗಿದೆ.








