• June 20, 2022

ಸಿಂಪಲ್ ಸ್ಟಾರ್ ಜೊತೆ ನಟಿಸುವ ಆಸೆ ಎಂದ ಶ್ರದ್ಧಾ ಶ್ರೀನಾಥ್

ಸಿಂಪಲ್ ಸ್ಟಾರ್ ಜೊತೆ ನಟಿಸುವ ಆಸೆ ಎಂದ ಶ್ರದ್ಧಾ ಶ್ರೀನಾಥ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಯಕ ಧರ್ಮ ಹಾಗೂ ಚಾರ್ಲಿ ನಡುವಿನ ಭಾಂದವ್ಯಕ್ಕೆ ಸಿನಿಪ್ರಿಯರು ಮನ ಸೋತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದಲೂ ಚಾರ್ಲಿ ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಚಾರ್ಲಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಸಿನಿಮಾ ಭಾವನಾತ್ಮಕವಾಗಿ ಜನರ ಮನಸ್ಸನ್ನು ಕಟ್ಟಿ ಹಾಕಿದೆ.

ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ ಯು ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಚಾರ್ಲಿ ಸಿನಿಮಾ ನೋಡಿದ ನಟಿಯೊಬ್ಬರು ರಕ್ಷಿತ್ ಶೆಟ್ಟಿ ನಟನೆಗೆ ಫಿದಾ ಆಗಿದ್ದಾರೆ. ಮಾತ್ರವಲ್ಲ ಅವರೊಂದಿಗೆ ನಟಿಸಬೇಕೆನ್ನುವ ಇರಾದೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಆ ನಟಿ ಬೇರಾರೂ ಅಲ್ಲ, ಶ್ರದ್ಧಾ ಶ್ರೀನಾಥ್. ಹೌದು, ಚಾರ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಶ್ರದ್ಧಾ ಶ್ರೀನಾಥ್ ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ಇತ್ತೀಚೆಗಷ್ಟೇ ನಾನು ಚಾರ್ಲಿ ಸಿನಿಮಾ ನೋಡಿದೆ. ರಕ್ಷಿತ್ ಶೆಟ್ಟಿ ನಿಮ್ಮ ಅಭಿನಯ ಅದ್ಭುತವಾದುದು. ನಾನು ನಿಮ್ಮ ಜೊತೆ ತೆರೆ ಹಂಚಿಕೊಳ್ಳಲು ಬಯಸುತ್ತೇನೆ. ಕಿರಣ್ ರಾಜ್, ನಿಮ್ಮ ಕೆಲಸವೂ ಅತ್ಯತ್ತಮವಾಗಿದ್ದು, ನನಗೆ ನಿಮ್ಮ ಬಗ್ಗೆಯೂ ಹೆಮ್ಮೆ ಇದೆ. ನಿಮ್ಮ ಬರವಣಿಗೆ, ನಿರ್ದೇಶನ ಸೊಗಸಾಗಿ ಮೂಡಿ ಬಂದಿದೆ” ಎಂದು ಹೇಳಿದ್ದಾರೆ ಶ್ರೀನಾಥ್.

ಈ ಟ್ವಿಟ್ಟ್ ಗೆ ಸ್ಪಂದಿಸಿರುವ ರಕ್ಷಿತ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ” ನಿಮ್ಮ ಅಭಿನಯವನ್ನು ಕೂಡಾ ನಾನು ಇಷ್ಟಪಡುತ್ತೇನೆ. ಆದಷ್ಟು ಬೇಗ ಜೊತೆಯಲ್ಲಿ ಕೆಲಸ ಮಾಡುವಂತಾಗಲಿ ಎಂದು ನಾನು ಆಶಿಸುತ್ತೇನೆ” ಎಂದಿದ್ದಾರೆ.