• April 7, 2022

ಈ ದೇಶದಲ್ಲಿ ‘ಬೀಸ್ಟ್’ ಬ್ಯಾನ್!!!

ಈ ದೇಶದಲ್ಲಿ ‘ಬೀಸ್ಟ್’ ಬ್ಯಾನ್!!!

ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ತಳಪತಿ ವಿಜಯ್ ಅವರ ಮುಂದಿನ ಚಿತ್ರ ‘ಬೀಸ್ಟ್’ ಇದೇ ಏಪ್ರಿಲ್ 13ರಿಂದ ಪ್ರಪಂಚಾದಾದ್ಯಂತ ಪ್ರದರ್ಶನ ಕಾಣಲಿದೆ.ಅಭಿಮಾನಿಗಳು ಹುಚ್ಚೆದ್ದು ಕಾಯುತ್ತಿರೋ ಈ ಚಿತ್ರದೆಡೆಗೆ ಬಿಡುಗಡೆಯಾದಂತ ಹಾಡುಗಳಿಂದ ಎತ್ತರವನೇರಿದ ನಿರೀಕ್ಷೆಗಳು ಟ್ರೈಲರ್ ತೆರೆಕಂಡಮೇಲಂತು ಮುಗಿಲು ಮುಟ್ಟಿವೆ. ಇಂತಹ ಒಂದು ಅತೀ ಪ್ರಸಿದ್ಧ, ಅತಿನಿರೀಕ್ಷಿತ ಸಿನಿಮಾ ಕುವೈತ್ ನಲ್ಲಿ ಬ್ಯಾನ್ ಆಗಿಹೋಗಿದೆ.

ಚೆನ್ನೈ ನಲ್ಲಿರೋ ಮಾಲ್ ಒಂದನ್ನು ತಮ್ಮ ವಶದಲಿಟ್ಟುಕೊಳ್ಳೋ ಒಂದಷ್ಟು ಉಗ್ರಗಾಮಿಗಳು ಹಾಗು ಅದನ್ನ ನಿವಾರಿಸೋ ಪೊಲೀಸ್ ಅಧಿಕಾರಿಯ ನಡುವಿನ ಕಥೆ ಈ ಸಿನಿಮಾದ್ದು. ಕುವೈತ್ ನ ಸಿನಿಮಾ ಬೋರ್ಡ್ ನವರು ಇತ್ತೀಚೆಗೆ ತಮ್ಮ ನಿರ್ಬಂಧಗಳನ್ನು ಅತ್ಯಂತ ಕಠಿಣ ಮಾಡಿರುವುದರಿಂದ, ದೇಶದಲ್ಲಿ ಬಿಡುಗಡೆ ಸ್ಥಗಿತಗೊಂಡ ಮೂರನೇ ಭಾರತೀಯ ಚಿತ್ರ ಇದಾಗಿದೆ. ‘ಬೀಸ್ಟ್’ ನಲ್ಲಿ ಮುಸಲ್ಮಾನರನ್ನು ಉಗ್ರಗಾಮಿಗಳಾಗಿಯೂ, ಹಾಗು ಆತಂಕವಾದಿಗಳ ರೂಪದಲ್ಲಿ ತೋರಿಸಲಾಗಿದೆ. ನಿಖರವಾದ ಕಾರಣ ಇನ್ನು ತಿಳಿಯದಿದ್ದರೂ, ಸದ್ಯಕ್ಕೆ ಮುಸಲ್ಮಾನ ಭಾವನೆಗೆ ಬೇಸರ ತಂದಿರುವುದು ಹಾಗು ಟೆರರಿಸಮ್ ಬಗೆಗೆ ಸಿನಿಮಾದಲ್ಲಿ ತೋರಿಸಿರುವುದೇ ಸಿನಿಮಾ ಬ್ಯಾನ್ ಹಿಂದಿರೋ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ದುಲ್ಕರ್ ಸಲ್ಮಾನ್ ಅಭಿನಯದ ‘ಕುರುಪ್’ ಚಿತ್ರ ಹಾಗು ವಿಷ್ಣು ವಿಶಾಲ್ ಅಭಿನಯದ ‘ ಎಫ್ ಐ ಆರ್’ ಚಿತ್ರಗಳನ್ನು ಕೂಡ ಕುವೈತ್ ನ ಚಲನಚಿತ್ರ ಮಂಡಳಿ ತಮ್ಮ ದೇಶದಲ್ಲಿ ಬ್ಯಾನ್ ಮಾಡಿತ್ತು. ‘ಕುರುಪ್’ ಸಿನಿಮಾದಲ್ಲಿ ಅಪರಾಧಿಯೊಬ್ಬನಿಗೆ ಕುವೈತ್ ದೇಶದಲ್ಲಿ ಜಾಗ ಕೊಟ್ಟಿರುವುದಾಗಿಯೂ ಹಾಗೇ, ‘ಎಫ್ ಐ ಆರ್’ ಚಿತ್ರ ಭಯೋತ್ಪಾದಕರ ಬಗ್ಗೆ ಹೇಳುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ವಿಜಯ್ ಅವರಿಗೆ ಪೂಜಾ ಹೆಗ್ಡೆ ನಾಯಕಿಯಾಗಿ ಜೋಡಿಯಾಗಿರುವ ಈ ಚಿತ್ರವನ್ನ ‘ಡಾಕ್ಟರ್’ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕ ಅನಿರುಧ್ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ. ‘ಸನ್ ಪಿಕ್ಚರ್ಸ್’ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಕುವೈತ್ ಒಂದನ್ನು ಬಿಟ್ಟು ಮತ್ತೆಲ್ಲ ಅರಬ್ ರಾಷ್ಟ್ರಗಳಲ್ಲಿ ಅನಾಯಾಸವಾಗಿ ಬಿಡುಗಡೆಗೆ ಅನುಮತಿ ಪಡೆದುಕೊಂಡಿದೆ. ಅರಬ್ ರಾಷ್ಟ್ರಗಳಲ್ಲಿ ವಿಜಯ್ ಅವರಿಗೆ ಅಸಂಖ್ಯ ಅಭಿಮಾನಿಗಳಿದ್ದು ಈ ನಿರ್ಧಾರ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಬಿಗುವಾದ ಹೊಡೆತ ನೀಡಲಿದೆ. ಸದ್ಯಕ್ಕೆ ಕುವೈತ್ ಒಂದನ್ನು ಬಿಟ್ಟು ಪ್ರಪಂಚಾದೆಲ್ಲೆಡೆ ‘ಬೀಸ್ಟ್’ ಏಪ್ರಿಲ್ 13ರಿಂದ ತೆರೆಕಾಣಲಿದೆ.