- March 12, 2022
‘ಎದ್ದೇಳು ಮಂಜುನಾಥ 2’


2009ರಲ್ಲಿ ಬಿಡುಗಡೆಯಾಗಿ ಜನಮನಗೆಲ್ಲಲು ದೊಡ್ಡಮಟ್ಟದಲ್ಲೇ ಯಶಸ್ವಿಯಾಗಿದ್ದ ಚಿತ್ರ ‘ಎದ್ದೇಳು ಮಂಜುನಾಥ’. ಸೋಂಬೇರಿ ಮಂಜ ಹಾಗೇ ಅವನ ಪರಿಶ್ರಮಿ ಧರ್ಮಪತ್ನಿ ಗೌರಿಯ ಕಥೆ ಹೇಳಿದ ಈ ಚಿತ್ರ ನಾಯಕರಾದ ಜಗ್ಗೇಶ್ ಅವರಿಗೂ ನಿರ್ದೇಶಕರಾದ ಗುರುಪ್ರಸಾದ್ ಅವರಿಗೂ ಚಿತ್ರರಂಗದಲ್ಲಿ ಹೊಸತೊಂದು ಬ್ರೇಕ್ ಕೊಟ್ಟಿತ್ತು. ಈಗ ‘ಎದ್ದೇಳು ಮಂಜುನಾಥ’ನ ಸೃಷ್ಟಿಕರ್ತ ಮತ್ತೊಮ್ಮೆ ಮಂಜನನ್ನ ಏಳಿಸಲು ಹೊರಟಿದ್ದಾರೆ. ಆದರೆ ಈ ಬಾರಿ ಜಗ್ಗೇಶ್ ಇಲ್ಲದೆ!!!


ಹೌದು,’ಎದ್ದೇಳು ಮಂಜುನಾಥ 2′ ಬರುತ್ತಿದೆ. ಗುರುಪ್ರಸಾದ್ ಅವರೇ ಈ ಸಿನಿಮಾದ ಸೃಷ್ಟಿಕರ್ತರಾದರು ಮೊದಲ ಸಿನಿಮಾಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವಂತೆ. ಎಲ್ಲಿಯವರೆಗೆಂದರೆ, ‘ಎದ್ದೇಳು ಮಂಜುನಾಥ’ ಸಿನಿಮಾದ ಯಶಸ್ಸಿನಲ್ಲಿ ತಮ್ಮದೂ ಒಂದು ಪಾಲು ಇಟ್ಟುಕೊಂಡಿದ್ದ ಜಗ್ಗೇಶ್ ‘ಎದ್ದೇಳು ಮಂಜುನಾಥ 2’ನಲ್ಲಿ ಎಲ್ಲೂ ಕಾಣಸಿಗುವುದಿಲ್ಲವಂತೆ. ಕಥೆ ಕೂಡ ಮೊದಲ ಸಿನಿಮಾಗೆ ಅಸಂಭದ್ದವಂತೆ. ಹಳೆಯ ಹೆಸರನ್ನೇ ಇಟ್ಟುಕೊಂಡು ಹೊಸ ಕಥೆಯೊಂದನ್ನು ಹೇಳಹೊರಟಿದ್ದಾರೆ ನಿರ್ದೇಶಕ ಗುರುಪ್ರಸಾದ್.


ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ನಾಯಕನಟನ ಪಾತ್ರಕ್ಕೆ ಸ್ವತಃ ನಿರ್ದೇಶಕ ಗುರುಪ್ರಸಾದ್ ಅವರೇ ಬಣ್ಣ ಹಚ್ಚಿರುವುದು. ಆ ಮೂಲಕ ನಿರ್ದೇಶನದಲ್ಲಿ ತಮ್ಮದೇ ವಿಶೇಷ ಕೈಚಳಕವನ್ನು ಕನ್ನಡಿಗರಿಗೆ ತೋರಿಸಿರೋ ಗುರುಪ್ರಸಾದ್, ನಾಯಕನಟನಾಗಿ ಮೊದಲ ಬಾರಿ ತೆರೆಮೇಲೆ ಬರಲಿದ್ದಾರೆ. ಇವರಿಗೆ ಜೊತೆಯಾಗಿ ತಮಿಳು ಕಿರುತೆರೆಯಲ್ಲಿ ಹೆಸರುವಾಸಿಯಾಗಿರುವ ಕನ್ನಡ ನಟಿ, ರಚಿತಾ ಮಹಾಲಕ್ಷ್ಮಿ ನಾಯಕಿಯ ಪಾತ್ರದಲ್ಲಿರಲಿದ್ದಾರೆ. ಈಗಾಗಲೇ ಚಿತ್ರೀಕರಣವನ್ನ ಮುಗಿಸಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡೋ ಸಾಧ್ಯತೆಯಿದೆ. ಅಲ್ಲದೇ ಜಗ್ಗೇಶ್ ಅವರು ಆರ್ಭಟಿಸಿದಂತ ಮಂಜನ ರೀತಿಯ ಪಾತ್ರವನ್ನ ಈ ಬಾರಿಯು ನೋಡಬಹುದಾ? ಹೌದಾದರೆ ಅದನ್ನ ಗುರುಪ್ರಸಾದ್ ಹೇಗೆ ನೆರವೇರಿಸುತ್ತಾರೆ? ಎನ್ನುವ ಹಲವಾರು ಕುತೂಹಲಗಳು ಕೂಡ ಹುಟ್ಟುತ್ತಿವೆ.




