• July 11, 2022

ಘೋಷಣೆಗೆ ಕಾಯುತ್ತಿವೆ ಶಿವಣ್ಣನ ಸಾಲು ಸಾಲು ಸಿನಿಮಾಗಳು.

ಘೋಷಣೆಗೆ ಕಾಯುತ್ತಿವೆ ಶಿವಣ್ಣನ ಸಾಲು ಸಾಲು ಸಿನಿಮಾಗಳು.

ಸದಾ ಚೈತನ್ಯದಿಂದ ತುಂಬಿತುಳುಕುವ, ಚಂದನವನದ ಚಿರಯುವಕ ಶಿವರಾಜಕುಮಾರ್ ಅವರು ಸದಾ ಬ್ಯುಸಿಯಾಗಿರುವವರು. ತಮ್ಮ 125ನೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಶಿವಣ್ಣನವರಿಗೆ ನಾಳೆ(ಜುಲೈ 12) ಜನುಮದಿನದ ಸಂಭ್ರಮ. 60ನೇ ವರ್ಷ ತುಂಬಲಿರೋ ಇವರು ನಾಯಕರಾಗಿ ನಟಿಸಲು ಸಾಲು ಸಾಲು ಸಿನಿಮಾಗಳು ಸಿದ್ದವಿವೆ. ಇವರ ಜನುಮದಿನದ ಪ್ರಯುಕ್ತ ಸಿನಿಮಾದ ಬಗೆಗಿನ ಅಧಿಕೃತ ಘೋಷಣೆಗಳನ್ನು ಮಾಡಲು ಚಿತ್ರತಂಡಗಳು ಕಾಯುತ್ತಿವೆ.

ಸದ್ಯ ತಮ್ಮ 125ನೇ ಸಿನಿಮಾವಾದ ಹರ್ಷ ಅವರ ನಿರ್ದೇಶನದ ‘ವೇದಾ’ದ ಚಿತ್ರೀಕರಣದಲ್ಲಿರುವ ಶಿವಣ್ಣ ನಂತರ ‘ಬೀರಬಲ್’ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅವರ ಜೊತೆ ಕೈ ಜೋಡಿಸಲಿದ್ದಾರೆ. ಚಿತ್ರಕ್ಕೆ ‘ಘೋಸ್ಟ್’ ಎಂದು ಹೆಸರಿಡಲಾಗಿದ್ದು, ಮಾಸ್ ಥ್ರಿಲರ್ ರೀತಿಯ ಕಥೆ ಸಿನಿಮಾದಲ್ಲಿರಲಿದೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದಲ್ಲಿರಲಿದೆ. ಸಿನಿಮಾದ ಪೋಸ್ಟರ್ ಒಂದನ್ನು ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದ್ದು, ‘ಅಭಿನಯ ಚಕ್ರವರ್ತಿ m’ ಕಿಚ್ಚ ಸುದೀಪ ಅವರು ಪೋಸ್ಟರ್ ಅನ್ನು ಜನರಿಗರ್ಪಣೆ ಮಾಡಲಿದ್ದಾರೆ.

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ನಿರ್ದೇಶಕನಾಗಿ ಪ್ರಯತ್ನಿಸುತ್ತಿರುವ ಮೊದಲ ಸಿನಿಮಾದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿದ್ದಾರೆ. ‘ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಎಂ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡುತ್ತಿರೋ ಈ ಸಿನಿಮಾದ ಟೈಟಲ್ ಅನ್ನು ಇದೇ ಜುಲೈ 12ರಂದು ಘೋಷಣೆ ಮಾಡಲಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ಅವರು ಶಿವಣ್ಣನಿಗೆ ನಿರ್ದೇಶನ ಮಾಡಲಿರೋ ಸಿನಿಮಾದ ಶೀರ್ಷಿಕೆ ಪೋಸ್ಟರ್ ಕೂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬರಲಿದೆ.

ಇವುಗಳಷ್ಟೇ ಅಲ್ಲದೇ ವರುಷಗಳ ಹಿಂದೆಯೇ ಘೋಷಿತವಾದ ಕೊಟ್ರೇಶ್ ಎಂಬ ಹೊಸ ನಿರ್ದೇಶಕರ ಜೊತೆಗೆ ಶಿವಣ್ಣ ಮಾಡಲಿರೋ ಸಿನಿಮಾದ ಟೈಟಲ್ ಪೋಸ್ಟರ್ ಕೂಡ ನಾಳೆಯೇ ಬಿಡುಗಡೆಯಾಗಲಿದೆ. ‘ವಜ್ರಕಾಯ’ ‘ಭಜರಂಗಿ’ ಮುಂತಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಎ ಹರ್ಷ ಹಾಗು ಯೋಗಿ ಜಿ ರಾಜ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿರೋ ಕೊಟ್ರೇಶಿ ಅವರು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಲಿದ್ದಾರೆ.

ಇದೆಲ್ಲದರ ಜೊತೆಗೆ ಶಿವಣ್ಣನ ಅಭಿಮಾನಿಗಳು ಕಾಯುತ್ತಿರುವುದೇ ಇನ್ನೊಂದು ಸಿನಿಮಾದ ಸುದ್ದಿಗೆ. 2017ರಲ್ಲಿ ತೆರೆಕಂಡಂತಹ ನರ್ತನ್ ಅವರ ನಿರ್ದೇಶನದ ‘ಮಫ್ತಿ’ ಸಿನಿಮಾದಲ್ಲಿನ ಶಿವಣ್ಣನ ಪಾತ್ರ ‘ಭೈರತಿ ರಣಗಲ್ಲು’ವಿನ ಜೀವನ ಕಥೆ ಹೇಳೋ ಸಿನಿಮಾವನ್ನು ಪಾತ್ರದ ಹೆಸರಿನಲ್ಲೇ ನರ್ತನ್ ಹಾಗು ಶಿವಣ್ಣ ಮಾಡುವುದು ಖಾತ್ರಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಹೊಸ ವಿಷಯಗಳು ಕೇಳಿಬಂದಿಲ್ಲ. ಹಾಗಾಗಿ ಈ ಚಿತ್ರದಿಂದಲೂ ಅಪ್ಡೇಟ್ ಗಳು ಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.