- May 5, 2022
ಶಿವಣ್ಣನ ಅಭಿಮಾನಿಗಳಿಗೆ ಇದೀಗ ಹೊಸ ಸಂತಸ.


‘ಕರುನಾಡ ಚಕ್ರವರ್ತಿ’, ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಸದಾ ಬ್ಯುಸಿ ಆಗಿರುವ ಚಿರಯುವಕ ಶಿವಣ್ಣನವರ ಮುಂದಿನ ಚಿತ್ರ ‘ಬೈರಾಗಿ’ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೆಜ್ಜೆ ಇಡಲಿದೆ. ಸದ್ಯ ತಮ್ಮ 125ನೇ ಚಿತ್ರವಾದ ‘ವೇದ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಶಿವಣ್ಣನವರ ಮುಂದಿನ ಚಿತ್ರದ ಬಗ್ಗೆ ದೊಡ್ಡ ಮಾತುಗಳೆ ಕೇಳಿಬರುತ್ತಲಿವೆ. ಸದ್ಯದ ಸುದ್ದಿಗಳನ್ನು ನಂಬುವುದಾದರೆ, ಶಿವಣ್ಣ ತಮಿಳಿನ ಸೂಪರ್ ಸ್ಟಾರ್ ಜೊತೆಗೆ ನಟಿಸಲಿದ್ದಾರೆ. ಅವರು ಬೇರಾರು ಅಲ್ಲದೇ ಭಾರತೀಯ ಚಿತ್ರರಂಗಕ್ಕೆ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್.


ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾಷಾ ಭೇಧ-ಭಾವದ ರೇಖೆಗಳು ಅಳಿಸಿಹೋಗುತ್ತಿವೆ. ನಟರು ನಿರ್ದೇಶಕರು ಭಾಷೆಗಳ ಹಂಗಿಲ್ಲದೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಶಿವಣ್ಣನವರು ತಮಿಳಿನ ಪಾನ್ ಇಂಡಿಯನ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ರಜನಿಕಾಂತ್ ಅವರ ಮುಂದಿನ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಶಿವಣ್ಣ. ‘ಡಾಕ್ಟರ್’ ಹಾಗು ‘ಬೀಸ್ಟ್’ ಚಿತ್ರಗಳ ಎಲ್ಲೆಡೆ ಸದ್ದು ಮಾಡುತ್ತಿರುವ ಸದ್ಯದ ಸ್ಟಾರ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೊಂದಿಗೆ ರಜನಿಕಾಂತ್ ಅವರು ತಮ್ಮ ಮುಂದಿನ ಚಿತ್ರವನ್ನ ಮಾಡಲಿರುವುದು ಖಚಿತವಾಗಿರೋ ವಿಷಯ. ಈ ಚಿತ್ರಕ್ಕೆ ಅನಿರುಧ್ ರವಿಚಂದರ್ ಅವರ ಸಂಗೀತ ಕೂಡ ಇರಲಿದೆ ಎಂಬುದನ್ನು ಖಾತ್ರಿಪಡಿಸಿದೆ ಚಿತ್ರತಂಡ. ಆದರೆ ಈವರೆಗೆ ತಾರಾಗಣದ ಬಗೆಗೆ ಯಾವ ಸುದ್ದಿಯೂ ಹೊರಬಿದ್ದಿರಲಿಲ್ಲ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿರುವುದರಿಂದ ತಾತ್ಕಾಲಿಕವಾಗಿ ಈ ಸಿನಿಮಾಗೆ ‘ತಲೈವರ್ 169’ ಎಂದು ಹೆಸರಿಡಲಾಗಿದೆ. ಚಿತ್ರದ ಬಗೆಗಿನ ಒಂದು ಹಂತದ ಮಾತುಕತೆ ಶಿವಣ್ಣ ಹಾಗು ನೆಲ್ಸನ್ ಅವರ ನಡುವೆ ನಡೆದಿರೋ ವರದಿಯಾಗಿದ್ದು, ಮುಂದಿನ ಹಂತದ ಚರ್ಚೆಗಾಗಿ ನಿರ್ದೇಶಕ ನೆಲ್ಸನ್ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ.




ಶಿವಣ್ಣ ಕನ್ನಡದ ಸ್ಟಾರ್ ನಟರು. ಪ್ರಸ್ತುತ ತಮ್ಮ 125ನೇ ಚಿತ್ರದಲ್ಲಿ ನಟಿಸುತ್ತಿರುವ ಇವರ ಅಭಿಮಾನಿ ಬಳಗ ತುಂಬಾ ದೊಡ್ಡದು. ಇನ್ನು ರಜನಿಕಾಂತ್ ಅವರಿಗೂ ಸಹ ಕನ್ನಡಿಗರೊಂದಿಗೆ ಅತ್ಯುತ್ತಮ ನಂಟಿದೆ. ಈ ಇಬ್ಬರು ಸ್ಟಾರ್ ನಟರು ಹಿಂದೆಂದೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳದಿರುವುದರಿಂದ ಈ ಸುದ್ದಿ ಸದ್ಯ ಎಲ್ಲರ ನಿರೀಕ್ಷೆಗಳನ್ನ ಹೆಚ್ಚಿಸುತ್ತಿದೆ. ಅಧಿಕೃತವಾದ ಮಾಹಿತಿ ಇನ್ನಷ್ಟೇ ಬರಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದುನೋಡಬೇಕಿದೆ.






