- April 22, 2022
‘ಜೇಮ್ಸ್’ ರಿ-ರಿಲೀಸ್ ಗೆ ಪ್ರತಿಕ್ರಯಿಸಿದ ಶಿವಣ್ಣ.


‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಅಪ್ಪುವನ್ನು ಕಣ್ತುಂಬಿಕೊಳ್ಳಲು ಸಾಗರದಂತೆ ಹರಿದುಬಂದಿತ್ತು ಅಭಿಮಾನಿ ಬಳಗ. ಸದ್ಯ ಸೋನಿ ಲಿವ್ ನಲ್ಲಿ ಲಭ್ಯವಿರುವ ‘ಜೇಮ್ಸ್’ ಚಿತ್ರ, ಇಂದು(ಏಪ್ರಿಲ್ 22) ಮರುಬಿಡುಗಡೆಗೊಂಡಿದೆ. ಆದರೆ ಈ ಬಾರಿಯ ಬಿಡುಗಡೆಯಲ್ಲಿ ವಿಶೇಷತೆಯೊಂದು ಸೇರಿಕೊಂಡಿದೆ.


ಈಗಾಗಲೇ ತಿಳಿದಿರುವಂತೆ ‘ಜೇಮ್ಸ್’ ಚಿತ್ರದ ಸಂಪೂರ್ಣ ಚಿತ್ರೀಕರಣದ ಮೊದಲೇ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ್ದರು. ಅವರ ಪಾತ್ರದ ಡಬ್ಬಿಂಗ್ ಕೂಡ ಅವರ ಧ್ವನಿಯಿಂದ ಆಗಿರಲಿಲ್ಲ. ಚಿತ್ರದಲ್ಲಿನ ಅಪ್ಪು ಪಾತ್ರಕ್ಕೆ ಕರುನಾಡ ಚಕ್ರವರ್ತಿ ಡಾ| ಶಿವರಾಜಕುಮಾರ್ ಅವರು ಧ್ವನಿಯಾಗಿದ್ದರು. ಅಪ್ಪು ಅಭಿನಯಿಸಿದ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದರು. ಈಗ ಸಿನಿಮಾ ಮರು-ಬಿಡುಗಡೆಯಾಗುತ್ತಿದೆ. ಆದರೆ ಈ ಬಾರಿ ಅಪ್ಪು ಪಾತ್ರಕ್ಕೆ ಶಿವಣ್ಣನ ಧ್ವನಿಯಲ್ಲ, ಬದಲಾಗಿ ಹೊಸ ತಂತ್ರಜ್ಞಾನದ ಸಹಾಯದಿಂದ ಅಪ್ಪು ಧ್ವನಿಯಲ್ಲೇ ಡೈಲಾಗ್ ಗಳು ಕೇಳಿಬರಲಿವೆ. ಶೂಟಿಂಗ್ ಸಂಧರ್ಭದಲ್ಲಿ ಅಭಿನಯಿಸುತ್ತ ಡೈಲಾಗ್ ಗಳನ್ನ ಹೇಳಿರುವಂತಹ ಅಪ್ಪು ಅವರ ಧ್ವನಿಯನ್ನೇ ಬಳಸಿ ಅದರ ಮೇಲೆ ಕೆಲಸ ಮಾಡಿ ಸಂಪೂರ್ಣ ಚಿತ್ರಕ್ಕೆ ಅಪ್ಪು ಅವರ ಧ್ವನಿಯನ್ನ ಅಳವಡಿಸಿ ಚಿತ್ರವನ್ನ ಮರುಬಿಡುಗಡೆ ಮಾಡುತ್ತಿದೆ ಚಿತ್ರತಂಡ.






ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ ಶಿವಣ್ಣ, “ಈ ಬಗೆಯ ತಂತ್ರಜ್ಞಾನವೊಂದು ಇರುವ ವಿಷಯವೇ ನನಗೆ ತಿಳಿದಿರಲಿಲ್ಲ. ಅಪ್ಪು ಧ್ವನಿಯಲ್ಲೇ ಚಿತ್ರವನ್ನ ನೋಡೋ ಖುಷಿಯೇ ಬೇರೆ. ಈ ಬಗ್ಗೆ ಚಿತ್ರತಂಡ ಮೊದಲೇ ಪ್ರಯತ್ನಿಸಬೇಕಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಕೆಲಸ ಮಾಡಬೇಕಿತ್ತು” ಎಂದಿದ್ದಾರೆ ಶಿವಣ್ಣ. ಅಪ್ಪು ಅವರ ಕನಸಾದ ಶಕ್ತಿಧಾಮದಲ್ಲಿ ಸದ್ಯ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ವೇಳೆ ಈ ಮಾತನ್ನ ಹೇಳಿದ್ದಾರೆ ಶಿವಣ್ಣ.






