- May 10, 2022
ಈಕೆ ನಟಿ ಮಾತ್ರವಲ್ಲ… ರೂಪದರ್ಶಿಯೂ ಹೌದು


ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ವಿನಲ್ಲಿ ಬಡ್ಡಿ ಬಂಗಾರಮ್ಮ ಮಗಳು ವಸು ಆಗಿ ಅಭಿನಯಿಸುತ್ತಿರುವ ನಿಶಾ ಹೆಗಡೆ ಬಾಲಕಲಾವಿದೆಯಾಗಿ ಕಿರುತೆರೆಯಲ್ಲಿ ಮಿಂಚಿದ ಪ್ರತಿಭೆ ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರಾವಾಹಿಯಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದ ನಿಶಾ ಮುಂದೆ ಓದಿನ ಸಲುವಾಗಿ ನಟನೆಗೆ ವಿರಾಮ ಹಾಕಿದರು. ಥಿಯೇಟರ್ ಸ್ಟಡೀಸ್ ನಲ್ಲಿ ಪದವಿ ಪಡೆದಿರುವ ನಿಶಾ ಮಾಡೆಲಿಂಗ್ ಜಗತ್ತಿನಲ್ಲಿಯೂ ಸದ್ದು ಮಾಡಿದ ಸುಂದರಿ.


ಒಂದಷ್ಟು ಫ್ಯಾಷನ್ ಶೋ ಗಳಲ್ಲಿ ಬೆಕ್ಕಿನ ನಡುಗೆ ಮಾಡಿ ಸೈ ಎನಿಸಿಕೊಂಡಿರುವ ನಿಶಾ ನಟಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ತಮಿಳು ಕಿರುತೆರೆಯಲ್ಲಿ. ತಮಿಳಿನ ಸ್ಟಾರ್ ವಿಜಯ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಪೊಣ್ಣುಕು ತಂಗ ಮನಸ್ಸು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ಹೆಗ್ಗಳಿಕೆ ಈಕೆಯದು.


“ಒಂದು ಒಳ್ಳೆ ಲವ್ ಸ್ಟೋರಿ” ಸಿನಿಮಾದ ಮೂಲಕ ಚಂದನವನಕ್ಕೆ ಈ ಚೆಲುವೆ ಕಾಲಿಟ್ಟಿದ್ದು ಆ ಸಿನಿಮಾ ಬಿಡುಗಡೆಯಾಗಬೇಕಿದೆ. ತದ ನಂತರ ಬಂಗಾರಮ್ಮನ ಮಗಳಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟಿರುವ ನಿಶಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಇನ್ನು ಜೀವನ್ ಹಳ್ಳೀಕರ್ ನಿರ್ದೇಶನದ ಥ್ರಿಲ್ಲರ್, ಸಸ್ಪನ್ಸ್ ಕಥಾ ಹಂದರವುಳ್ಳ “ಬ್ಲಾಕ್ ಶೀಪ್” ನಲ್ಲಿ ನಾಯಕಿಯಾಗಿ ನಟಿಸಿದ್ದು ಅದರಲ್ಲಿ ಈಕೆ ಡಬಲ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇದರ ಜೊತೆಗೆ ಪಿ ಆರ್ ಕೆ ಪ್ರೊಡಕ್ಷನ್ಸ್ (PRK Productions) ನಡಿಯಲ್ಲಿ ಸಿಂಧು ಶ್ರೀನಿವಾಸ್ ಮೂರ್ತಿ ನಿರ್ದೇಶನ ಮಾಡುತ್ತಿರುವ ಆಚಾರ್ & ಕೋ ಎನ್ನುವ ಸಿನಿಮಾದಲ್ಲಿಯೂ ನಿಶಾ ಬಣ್ಣ ಹಚ್ಚಲಿದ್ದಾರೆ.


ರೂಪದರ್ಶಿಯಾಗಿಯೂ ಸೈ ಎನಿಸಿಕೊಂಡ ಬೆಡಗಿ
ಸದ್ಯ ನಟನೆಯಲ್ಲಿ ಬ್ಯುಸಿಯಾಗಿರುವ ನಿಶಾ ಹೆಗಡೆ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಮಾಲ್ ಮಾಡಿದ್ದಾರೆ. ಉಬರ್, ಪ್ಲಿಪ್ ಕಾರ್ಟ್, ತನಿಷ್ಕಾ ಜ್ಯುವೆಲ್ಲರಿ, ವಿಜಯಲಕ್ಷ್ಮಿ ಸಿಲ್ಕ್ಸ್, ಹೆಚ್ ಪಿ ಲಾಪ್ ಟಾಪ್ ಹೀಗೆ ಅನೇಕ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮೋಡಿ ಮಾಡಿದ್ದಾರೆ. ಇನ್ನು ಆಶೀರ್ವಾದ್ ಬ್ರಾಂಡ್ ನ ಜಾಹೀರಾತಿನಲ್ಲಿ ಜನಪ್ರಿಯ ನಟಿ ರೇವತಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.


ನೃತ್ಯಗಾರ್ತಿಯೂ ಹೌದು
ನಟನೆಯ ಹೊರತಾಗಿ ನಿಶಾ ಹೆಗಡೆ ಅತ್ಯುದ್ಭುತ ನೃತ್ಯಗಾರ್ತಿಯೂ ಹೌದು. ಕಥಕ್ ನೃತ್ಯ ಕಲಾವಿದೆಯಾಗಿರುವ ಆಕೆ ಕಥಕ್ ನಲ್ಲಿ ಪದವಿ ಕೂಡಾ ಪಡೆದಿದ್ದಾರೆ. ಇನ್ನು ಇದರ ಜೊತೆಗೆ ವೆಸ್ಟರ್ನ್ ಡ್ಯಾನ್ಸ್ ನಲ್ಲಿಯೂ ಮುಂದಿರುವ ಈಕೆ ಬಾಲಿವುಡ್ ನ ಹೆಸರಾಂತ ಕೊರಿಯೋಗ್ರಾಫರ್ ಶೈಮಾಕ್ ದಾವರ್ಸ್ ಕಂಪೆನಿಯಲ್ಲಿ ಪಳಗಿದ ಚೆಲುವೆ ಹೌದು.




