• July 9, 2022

ನಮ್ಮೂರ ಮಂದಾರ ಹೂವೆ ನಾಯಕಿಯ ಸಿನಿಮಾತು

ನಮ್ಮೂರ ಮಂದಾರ ಹೂವೆ ನಾಯಕಿಯ ಸಿನಿಮಾತು

90ರ ದಶಕದ ಕನ್ನಡ ಚಿತ್ರರಂಗದ ನಾಯಕಿಯರನ್ನು ಗುರುತಿಸುವುದಾದರೆ ಆ ಸಾಲಿನಲ್ಲಿ ಪ್ರೇಮ ಅವರು ಇದ್ದೇ ಇರುತ್ತಾರೆ. ತದನಂತರ ಮಾಡಿದ ಸಿನಿಮಾಗಳು ಕೂಡ ಉತ್ತಮ ಕಥಾಧಾರಿತ ಚಿತ್ರಗಳೇ ಆಗಿವೆ. ಸಿನೆಮಾಗಳನ್ನು ತುಂಬಾ ಅವಲೋಕಿಸಿ ಒಪ್ಪಿಕೊಳ್ಳುತ್ತಿದ್ದ ಪ್ರೇಮ ಪ್ರದರ್ಶನಾಧಾರಿತ ಚಿತ್ರಗಳನ್ನಷ್ಟೇ ಆಯ್ದುಕೊಂಡವರು. ಚಿತ್ರದ ಕಥೆ, ಹಾಡು ಹಾಗೂ ತಮ್ಮ ನಟನೆ ಇದೆಲ್ಲದರಿಂದಲೂ ಕನ್ನಡ ಜನಮಾನಸದಲ್ಲಿ ಉಳಿದುಕೊಂಡವರು.

ಸಿನಿಮಾದ ಹೊರತಾದ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯಲು ಬಯಸುವ ಪ್ರೇಮ ಸಿನಿರಂಗದ ತಮ್ಮ ಜರ್ನಿಯ ಬಗ್ಗೆ ಮಾತನಾಡುತ್ತಾ ” ಓಂ ಹಾಗೂ ನಮ್ಮೂರ ಮಂದಾರ ಹೂವೆ ಚಿತ್ರದ ಪಾತ್ರಗಳು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ನನ್ನ ಪಾತ್ರಗಳಿಗೆ ಜನರು ತಮ್ಮ ಪ್ರೀತಿಯನ್ನು ಸಾಕಷ್ಟು ನೀಡಿದ್ದಾರೆ. ಆದ್ದರಿಂದ ಕೇವಲ ಸಿನಿಮಾ ಮಾಡುವ ಸಲುವಾಗಿ ನಾನು ಪಾತ್ರಗಳನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ”ಎನ್ನುತ್ತಾರೆ.

“ಅದಲ್ಲದೆ ನನ್ನ ವೃತ್ತಿ ಜೀವನದಲ್ಲಿ ನಾನು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ನಾನು ಏನನ್ನು ಸಾಧಿಸಿರುವೆನೋ ಅದರಲ್ಲಿ ನನಗೆ ಪೂರ್ತಿ ತೃಪ್ತಿ ಇದೆ. ಅಲ್ಲದೆ ನನ್ನ ವೈಯಕ್ತಿಕ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ನಾನು ತುಂಬಾ ಇಷ್ಟ ಪಡುತ್ತೇನೆ, ಇದು ನನಗೆ ಅಪಾರವಾದ ಸಂತೋಷವನ್ನು ನೀಡುತ್ತದೆ. ಸಿನಿಮಾದವರು ನನ್ನ ಬಳಿ ಬಂದಾಗ ಆ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಸಾಧ್ಯವಿದ್ದರೆ ಮಾತ್ರ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳುತ್ತಾರೆ ಪ್ರೇಮಾ.

ಪ್ರಸ್ತುತ ಸಿನಿ ಜಗತ್ತಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ ಪ್ರೇಮ ”ಈಗಿನ ಕಾಲದಲ್ಲಿ ಚಲನಚಿತ್ರ ನಿರ್ಮಾಣ ಮಾಡುವಾಗ ತಾಂತ್ರಿಕ ಅಂಶಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದು ಕೆಲವೊಂದು ಬಾರಿ ಚಿತ್ರದ ತಿರುಳನ್ನೇ ದುರ್ಬಲಗೊಳಿಸುತ್ತದೆ. ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದಾಗ ನಾಯಕನ ಸುತ್ತ ಸುತ್ತುತ್ತಿದ್ದ ಕಥೆಯಲ್ಲಿ ನಾಯಕಿಯೂ ಉಳಿದ ಪಾತ್ರಗಳೂ ತುಂಬಾ ಪ್ರಮುಖವಾಗಿದ್ದವು. ಈಗ ಎಲ್ಲ ಕಡೆ ಇದನ್ನು ಕಾಣಲು ಸಾಧ್ಯವಿಲ್ಲ” ಎಂದರು.