• July 9, 2022

ಐದು ವರ್ಷಗಳ ನಂತರ ಮರಳಿ ಸಿನಿಮಾ ಕಡೆಗೆ ಎಸ್ ನಾರಾಯಣ್.

ಐದು ವರ್ಷಗಳ ನಂತರ ಮರಳಿ ಸಿನಿಮಾ ಕಡೆಗೆ ಎಸ್ ನಾರಾಯಣ್.

ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗವನ್ನ ಉತ್ತುಂಗಕ್ಕೇರಿಸಿದ್ದ ನಟ-ನಿರ್ದೇಶಕರುಗಳಲ್ಲಿ ಒಬ್ಬರು ಎಸ್ ನಾರಾಯಣ್ ಅವರು. ಕಥೆ ಚಿತ್ರಕತೆಯಿಂದ ಹಿಡಿದು, ನಟನೆ, ನಿರ್ದೇಶನ ಎಲ್ಲದರಲ್ಲೂ ಎತ್ತಿದ ಕೈ ಇವರು. ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಇದೀಗ ಐದು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಎಸ್ ನಾರಾಯಣ್ ಅವರು ಹಲವು ಧೀಮಂತ ಕಲಾವಿದರ ಜೊತೆಗೆ ಸಿನಿಮಾ ಮಾಡಿದವರು. ರಾಜಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ಅವರಿಂದ ಶಿವರಾಜಕುಮಾರ್, ಗಣೇಶ್ ಸುದೀಪ್ ಅವರವರೆಗೆ ಅಂದು-ಇಂದಿನ ನಟರಿಗೆ ನಿರ್ದೇಶನ ಮಾಡಿದ್ದಾರೆ. ‘ಸಿಂಹಾದ್ರಿಯ ಸಿಂಹ’, ‘ರವಿಮಾಮ’, ‘ವೀರಪರಂಪರೆ, ‘ಚೆಲುವಿನ ಚಿತ್ತಾರ’ ಹೀಗೆ ಇವರ ಹಿಟ್ ಸಿನಿಮಾಗಳ ಸಾಲು ಬೆಳೆಯುತ್ತಲೇ ಹೋಗುತ್ತದೆ. ಆದಿತ್ಯ ಹಾಗು ಅದಿತಿ ಪ್ರಭುದೇವ ಅವರು ನಾಯಕ ನಾಯಕಿಯಾಗಿ ನಟಿಸುತ್ತಿರುವ ಹೊಸ ಸಿನಿಮಾವೊಂದರ ಮೂಲಕ ಎಸ್ ನಾರಾಯಣ್ ಅವರು ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಚಿತ್ರಕ್ಕೆ ‘5ಡಿ’ ಎಂದು ಹೆಸರಿಡಲಾಗಿದೆ.

‘5ಡಿ’ ಚಿತ್ರದ ಚಿತ್ರೀಕರಣ ಬಹಳ ಹಿಂದೆಯೇ ಮುಗಿದಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಟ್ರೈಲರ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸುಮಾರು ಐದು ವರ್ಷಗಳ ನಂತರ ಸಿನಿಮಾ ಮಾಡಲು ಮುಂದಾಗಿರುವ ಎಸ್ ನಾರಾಯಣ್ ಅವರು ನಿರ್ದೇಶನದ ಜೊತೆಗೆ ಸಿನಿಮಾದ ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಮಾತ್ರವಲ್ಲದೆ ಸಂಗೀತ ನಿರ್ದೇಶನನ್ನೂ ಮಾಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಇದೇ ಆಗಸ್ಟ್ ತಿಂಗಳಿನಲ್ಲಿ ಚಿತ್ರ ತೆರೆಕಾಣಾಲಿದೆ ಎಂಬ ಸುದ್ದಿಯಿದೆ.