• June 18, 2022

ಸುಪ್ರಿತಾ ಸತ್ಯನಾರಾಯಣ ಹೊಸ ಸಿನಿಮಾದ ಹೊಸ ಸುದ್ದಿ.

ಸುಪ್ರಿತಾ ಸತ್ಯನಾರಾಯಣ ಹೊಸ ಸಿನಿಮಾದ ಹೊಸ ಸುದ್ದಿ.

ಕನ್ನಡ ಕಿರುತೆರೆಯ ‘ಸೀತಾ ವಲ್ಲಭ’ ಹಾಗು ‘ಸರಸು’ ಧಾರವಾಹಿಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಾಗಿ ಉಳಿದಿರುವ ನಟಿ ಸುಪ್ರಿತಾ ಸತ್ಯನಾರಾಯಣ್. ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿರುವ ಇವರು ಇದೀಗ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಹಲವಾರು ಚಿತ್ರದಲ್ಲಿ ನಟಿಸುತ್ತಿರುವ ಇವರ ಒಂದು ವಿಭಿನ್ನ ಸಿನಿಮಾ ‘ರುಗ್ನ’. ಸುನಿಲ್ ಎಸ್ ಭಾರಧ್ವಜ್ ನಿರ್ದೇಶನದ ಈ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಸುಪ್ರಿತಾ ಸತ್ಯನಾರಾಯಣ್ ಹಾಗು ಉದಯ್ ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ರುಗ್ನ’ ಚಿತ್ರದ ಟ್ರೈಲರ್ ಜೂನ್ 16ರಂದು ‘ಎ2 ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ವೆಂಕಟ್ ಭಾರಧ್ವಜ್ ಹಾಗು ಮಣಿಮಾರನ್ ಸುಬ್ರಹ್ಮಣ್ಯನ್ ನಿರ್ಮಾಣದ ಈ ಸಿನಿಮಾ ಈ ಹಿಂದೆ ‘ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರ ಉತ್ಸವ’ಕ್ಕೂ ಆಯ್ಕೆಯಾಗಿ, ಪ್ರದರ್ಶನ ಕಂಡಿತ್ತು. ಪ್ರೇಕ್ಷಕರೇಲ್ಲರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಸದ್ಯ ಬೆಳ್ಳಿತೆರೆ ಕಾಣಲು ಸಿದ್ಧವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರದ ಟೀಸರ್ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ತನ್ನ ವೈಯಕ್ತಿಕ ಜೀವನದಲ್ಲಿ ಕಷ್ಟಪಡುತ್ತಿರುವ ಕಲಾವಿದ ಅನಿಲ್(ಉದಯ್ ಆಚಾರ್), ಪದ ಪೋಣಿಸಿ ಕಥೆ ಗೀಚೋ ಕಥೆಗಾರ್ಥಿ ಸರಯು(ಸುಪ್ರಿತಾ). ಇವರಿಬ್ಬರ ಬದುಕಿನ ಕಥೆಯೇ ಈ ‘ರುಗ್ನ’. ನಚಿಕೇತ್ ಶರ್ಮ ಅವರ ಸಂಗೀತ ಸಿನಿಮಾದಲ್ಲಿದ್ದು, ಆದಷ್ಟು ಬೇಗ ಚಿತ್ರ ಪ್ರೇಕ್ಷಕರೆದುರಿಗೆ ಬರಲಿದೆ. ಹಿರಿತೆರೆಯಲ್ಲಿ ತಮ್ಮ ಪಯಣ ಆರಂಭಿಸೋ ಭರದಲ್ಲಿರುವ ಸುಪ್ರಿತಾ ಅವರಿಗೆ ಇದೊಂದು ಒಳ್ಳೆಯ ಆರಂಭವಾಗೊ ಭರವಸೆಯಲ್ಲಿದ್ದಾರೆ.

ಇದರ ಜೊತೆಗೆ ಸುಪ್ರಿತಾ ಅವರು ‘ಲಾಂಗ್ ಡ್ರೈವ್’ ಎಂಬ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಲು ಸಿಗುತ್ತಿದೆ. ಅರ್ಜುನ್ ಯೋಗಿ, ತೇಜಸ್ವಿನಿ ಶೇಖರ್, ಶಬರಿ ಮಂಜು ಮುಂತಾದವರು ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದು ಶ್ರೀರಾಜ್ ಅವರು ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯಾಗಿರೋ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, ಇದೊಂದು ಕಮರ್ಷಿಯಲ್ ಸಸ್ಪೆನ್ಸ್ ರೀತಿಯ ಕಥೆಯಾಗಿರೋ ಸಾಧ್ಯತೆಯಿದೆ. ‘ಲಾಂಗ್ ಡ್ರೈವ್’ ಸುಪ್ರೀತ ಸತ್ಯನಾರಾಯಣ್ ಅವರು ನಟಿಸಿರೋ ಮೊದಲ ಚಲನಚಿತ್ರವಾಗಿದೆ.