- April 5, 2022
ರಾಜ್ ಕುಟುಂಬದ ‘ಯುವ’ಕುಡಿಗೆ ಸ್ಟಾರ್ ನಿರ್ದೇಶಕನ ಸಾಥ್.


ರಾಜ್ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ನಟ-ನಟಿಯರು ಬಂದಿದ್ದಾರೆ. ಬರುತ್ತಲಿದ್ದಾರೆ ಕೂಡ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾದ ಯುವರಾಜಕುಮಾರ್ ಅವರು ಚಿತ್ರರಂಗಕ್ಕೆ ಬರುವುದು ಹಿಂದೆಯೇ ಖಾತ್ರಿಯಾಗಿತ್ತು. ಈಗ ಈ ಸುದ್ದಿಯಲ್ಲಿ ಬದಲಾವಣೆಯೊಂದಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವರಾಜ್ ಗೆ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ.


ಅಪ್ಪು ಅಗಲಿಕೆಯ ಬಳಿಕ ಅಸಂಖ್ಯ ಅಭಿಮಾನಿಗಳು ಯುವರಾಜಕುಮಾರ್ ಅವರೇ ನಮಗೆ ಮುಂದಿನ ‘ಅಪ್ಪು’ ಎಂದು ಭಾವಿಸುತ್ತಿದ್ದಾರೆ. ನಟನೆ-ನಾಟ್ಯದಲ್ಲೆಲ್ಲ ಚಿಕ್ಕಪ್ಪ ಅಪ್ಪುವನ್ನೇ ಹೋಲುವ ಯುವ ಅವರ ಮೊದಲ ಚಿತ್ರದ ಟೀಸರ್ ಬಹಳ ಹಿಂದೆಯೇ ಬಿಡುಗಡೆಯಾಗಿತ್ತು. ‘ಯುವ ರಣಧೀರ ಕಂಠೀರವ’ ಎಂಬ ಚಿತ್ರದಿಂದ ಒಂದು ಆಕ್ಷನ್-ಪ್ಯಾಕೆಡ್ ಟೀಸರ್ ಎಲ್ಲರ ಮನಸೆಳೆದಿತ್ತು. ಅಲ್ಲಿದ್ದ ಯುವ ಅವರ ಸ್ಟಂಟ್ ಗಳು ಎಲ್ಲರಿಗೂ ಅಪ್ಪುವನ್ನೇ ಹೋಲಿಸಿತ್ತು. ಸದ್ಯ ಈ ಚಿತ್ರ ಸ್ಥಗಿತೊಗೊಂಡಿದೆ. ಯುವರಾಜಕುಮಾರ್ ಅವರ ಮೊದಲ ಚಿತ್ರವಾಗಿ ತೆರೆಕಾಣಬೇಕಿದ್ದ ಈ ಸಿನಿಮಾ ದ್ವಿತೀಯ ಚಿತ್ರವಾಗಲಿದೆಯಂತೆ.


ಸಂತೋಷ್ ಆನಂದ್ ರಾಮ್ ಹಾಗು ಅಪ್ಪು ಜೋಡಿಯಲ್ಲಿ ಮೂರನೇ ಚಿತ್ರಕ್ಕೆ ಸಿದ್ಧತೆ ನಡೆದಿದ್ದು ಎಲ್ಲರಿಗೂ ತಿಳಿದಂತ ವಿಷಯ. ಇನ್ನೇನು ಅಧಿಕೃತವಾಗಿ ಘೋಷಿಸಬೇಕೆನ್ನುವಷ್ಟರಲ್ಲಿ ಅಪ್ಪು ಅಕಾಲಿಕರಾಗಿ ನಮ್ಮನ್ನೆಲ್ಲ ಅಗಲಿ ಹೊರಟಿದ್ದರು. ಹಾಗಾಗಿ ಸಂತೋಷ್ ಆನಂದ್ ರಾಮ್ ಅವರು ಕಥೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ತಂದುಕೊಂಡು ‘ಯುವ’ ಅಪ್ಪು ಯುವರಾಜಕುಮಾರ್ ಅವರಿಗೆ ನಿರ್ದೇಶನ ಮಾಡಲಿದ್ದಾರಂತೆ. ಇನ್ನು ಹೆಸರಿಡದ ಈ ಚಿತ್ರದ ಬಗೆಗಿನ ಅಧಿಕೃತ ಘೋಷಣೆ ಇದೆ ಏಪ್ರಿಲ್ 24ರಂದು ಆಗಲಿದೆಯತೆ.


ರಾಜಕುಮಾರ್ ಅವರ ಜನುಮದಿನದ ಪ್ರಯುಕ್ತವಾಗಿ ಅವರ ಕುಟುಂಬದ ಮುಂದಿನ ಕುಡಿಯ ಚೊಚ್ಚಲ ಚಿತ್ರದ ಬಗೆಗಿನ ಮಾಹಿತಿಯನ್ನು ಚಿತ್ರತಂಡ ಹೊರಹಾಕಲಿದೆಯಂತೆ. ಮೊದಲೇ ನಿರ್ಧಾರವಾದಂತೆ ಈ ಚಿತ್ರವನ್ನು ‘ಹೊಂಬಾಳೆ ಫಿಲಂಸ್’ ಸಂಸ್ಥೆ ನಿರ್ಮಾಣ ಮಾಡಲಿದೆ ಎಂಬ ಸುದ್ದಿಯೂ ಸಹ ಅಲ್ಲಲ್ಲಿ ಕೇಳಿಬರುತ್ತಿದೆ.






