- May 20, 2022
ಕಥೆಗಳಿಗೆ ನನ್ನ ಮೊದಲ ಆದ್ಯತೆ – ಸಂಜನಾ ಆನಂದ್


ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಇಂದು ಇಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದರುಗಳಿಗೇನು ಕಡಿಮೆಯಿಲ್ಲ. ಆ ಸಾಲಿಗೆ ಸೇರಿರುವ ಕೊಡಗಿನ ಕುವರಿಯ ಹೆಸರು ಸಂಜನಾ ಆನಂದ್. ಬಂದ ಅವಕಾಶವನ್ನು ಬೇಡ ಎನ್ನದೇ ಅಸ್ತು ಎಂದು ನಟನಾ ಜಗತ್ತಿಗೆ ಕಾಲಿಟ್ಟ ಸಂಜನಾ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕ ಪ್ರಭುವಿನ ಮನಸ್ಸಿಗೆ ಕನ್ನ ಹಾಕಿದ ಚೆಲುವೆ.


ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಮಡಿಕೇರಿ ಮೂಲಕ ಸಂಜನಾ ಇಂದು ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಪದವಿಯ ನಂತರ ಡೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ನಟನೆಯ ಸಲುವಾಗಿ ಕೆಲಸ ಬಿಟ್ಟರು.




ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿಜರ್ನಿ ಶುರು ಮಾಡಿದ ಸಂಜನಾ ಹಿಂದಿರುಗಿ ನೋಡಿದ್ದಿಲ್ಲ. ಮೊದಲ ಸಿನಿಮಾದಲ್ಲಿಯೇ ನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸಂಜನಾ ಮುಂದೆ ಮಳೆಬಿಲ್ಲು, ಸಲಗ, ಶೋಕಿಲಾಲ, ಕುಷ್ಕ, ಕ್ಷತ್ರಿಯ, ವಿಂಡೋಸೀಟ್ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


ಇದರ ಜೊತೆಗೆ ಪರಭಾಷೆಯ ಸಿನಿ ರಂಗಕ್ಕೂ ಕಾಲಿಟ್ಟಿರುವ ಸಂಜನಾ ತೆಲುಗಿನ ನೇನು ಮೀಕು ಬಾಗ ಕಾವಲ್ಸಿನ ವಾಡಿನಿ ಯಲ್ಲಿ ಅಭಿನಯಿಸಲಿದ್ದಾರೆ. “ಇಂದು ನಾನು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರೆ ಅದಕ್ಕೆ ಹನಿಮೂನ್ ವೆಬ್ ಸಿರೀಸ್ ಕಾರಣ. ನಾನು ನಾಯಕಿಯಾಗಿ ನಟಿಸಿದ್ದ ಹನಿಮೂನ್’ ವೆಬ್ ಸಿರೀಸ್ ತೆಲುಗಿಗೆ ಡಬ್ ಆಗಿತ್ತು. ಆ ವೆಬ್ ಸಿರೀಸ್ ಗೆ ಅಲ್ಲಿ ಉತ್ತಮ ಪ್ರತಿಕ್ರಿಯೆ ಕೂಡಾ ದೊರಕಿತ್ತು. ಬಹುಶಃ ಅದರಿಂದಾಗಿಯೇ ನನಗೆ ತೆಲುಗು ಸಿನಿಮಾ ನಟಿಸುವ ಅವಕಾಶ ದೊರಕಿತು” ಎನ್ನುತ್ತಾರೆ ಸಂಜನಾ.




“ತೆಲುಗಿನಲ್ಲಿ ಇದೀಗ ಮಗದೊಂದ ಅವಕಾಶ ಬಂದಿದೆ. ನನ್ನ ಮೊದಲ ಆದ್ಯತೆ ಏನಿದ್ದರೂ ಕಥೆಗಳಿಗೆ. ಮಾತ್ರವಲ್ಲ ಪಾತ್ರಗಳು ಕೂಡಾ ಮುಖ್ಯವಾಗುತ್ತದೆ. ಈಗ ಅಂತಹ ಕಥೆಗಳು, ಪಾತ್ರಗಳು ದೊರಕಿದೆ. ಅದನ್ನು ಚಿತ್ರತಂಡವೇ ರಿವೀಲ್ ಮಾಡಲಿದೆ” ಎಂದು ಸಂತಸದಿಂದ ಹೇಳುತ್ತಾರೆ ಸಂಜನಾ ಆನಂದ್.




