• July 19, 2022

ಕಿರುತೆರೆಗೆ ಕಾಲಿಡುತ್ತಿದ್ದಾನೆ ‘ಸಲಗ’.

ಕಿರುತೆರೆಗೆ ಕಾಲಿಡುತ್ತಿದ್ದಾನೆ ‘ಸಲಗ’.

ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರನ್ನು ನಿರ್ದೇಶಕನಾಗಿ ಗೆಲ್ಲಿಸಿದ ಸಿನಿಮಾ ‘ಸಲಗ’. ಮಂದಗತಿಯಲ್ಲಿ ಓಡುತ್ತಿದ್ದ ಅವರ ಸಿನಿಪಯಣಕ್ಕೆ ಅತೀವ ಚೈತನ್ಯ ತಂದುಕೊಟ್ಟ ಸಿನಿಮಾ ಇದು. ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಗೆದ್ದು, ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಇದೀಗ ಕಿರುತೆರೆಯ ಮೇಲೆ ಬರಲು ಸಜ್ಜಾಗಿದೆ. ಬಿಡುಗಡೆಯಾಗಿ ಸುಮಾರು ಒಂದು ವರ್ಷವೇ ಕಳೆಯುತ್ತಾ ಬಂದಮೇಲೆ ಇದೀಗ ಚಿತ್ರದ ಒಟಿಟಿ ಹಾಗು ಕಿರುತೆರೆ ಬಿಡುಗಡೆಯ ಬಗ್ಗೆ ಮಾತುಗಳು ಕೇಳುತ್ತಿದ್ದು, ಸಿನಿಮಾ ಕನ್ನಡದ ‘ಉದಯ ಟಿವಿ’ಯಲ್ಲಿ ಪ್ರದರ್ಶನ ಕಾಣಲಿರೋ ದಿನಾಂಕ ನಿಗದಿಯಾಗಿದೆ.

2021ರ ಅಕ್ಟೋಬರ್ 14ರಂದು ಬಿಡುಗಡೆಯಾಗಿದ್ದ ಪಕ್ಕ ರಾ ಆಕ್ಷನ್ ಎಂಟರ್ಟೈನರ್ ‘ಸಲಗ’. ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶಿಸಿ, ಅವರೇ ನಾಯಕರಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಸಂಜನಾ ಆನಂದ್ ನಾಯಕಿಯಾಗಿ, ಹಾಗೇ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ ಕೂಡ ನಟಿಸಿದ್ದರು. ಚರಣ್ ರಾಜ್ ಅವರ ಮೈ ನವೀರೇಳಿಸುವ ಸಂಗೀತ ಸಿನಿಮಾದಲ್ಲಿತ್ತು. ಇತ್ತೀಚೆಗಷ್ಟೇ ‘ಸನ್ ನೆಕ್ಸ್ಟ್(SUN NXT) ಆಪ್ ನಲ್ಲಿ ಸಿನಿಮಾ ಬರುತ್ತಿದೆ ಎಂದು ಚಿತ್ರತಂಡವೇ ಹೇಳಿದ್ದು, ಸದ್ಯ ನಿಖರ ದಿನಾಂಕ ಹೊರಬಿದ್ದಿಲ್ಲ. ಆದರೆ ಇದೇ ಜುಲೈ 24ರ ಸಂಜೆ 6:30kke ಸರಿಯಾಗಿ ‘ಸಲಗ’ ಸಿನಿಮಾ ‘ಉದಯ ಟಿವಿ’ಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ತೆರೆಕಾಣಲಿದೆ. ಈ ಬಗ್ಗೆ ‘ಉದಯ’ ವಾಹಿನಿಯವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಚಿತ್ರಕ್ಕಾಗಿ ಹಾತೊರೆದು ಕಾಯುತ್ತಿದ್ದ ಸಿನಿರಸಿಕರಿಗೆ ಈ ವಿಷಯ ಸಂತಸ ತಂದಿದೆ.