- July 5, 2022
ಅಪ್ಪುವನ್ನು ಹಾಡಿ ಹೊಗಳಿದ ಸಾಯಿ ಪಲ್ಲವಿ.


‘ಕರ್ನಾಟಕ ರತ್ನ’ ಪವರ್ ಸ್ಟಾರ್ ಡಾ| ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ಕಡೆಗಳಲ್ಲೂ ಅಭಿಮಾನಿಗಳಿದ್ದಾರೆ. ಇಂದು ನಮ್ಮೊಡನೆ ನಗಲು ಅವರಿಲ್ಲದಿದ್ದರೂ ಸಹ ಅವರ ಆ ಪರಿಶುದ್ಧ ನಗು ಪ್ರತಿಯೊಬ್ಬರ ಮನದಲ್ಲಿ ಎಂದಿಗೂ ಅಜರಾಮರ. ಸದ್ಯ ಅಪ್ಪು ಬಗ್ಗೆ ‘ಪ್ರೇಮಂ’ ಬೆಡಗಿ ಮಾತನಾಡಿದ್ದಾರೆ. ಒಮ್ಮೆಯಷ್ಟೇ ಭೇಟಿಯಾಗಿದ್ದಾದರೂ, ಆ ಭೇಟಿಯನ್ನೇ ನೆನಪಿಸಿಕೊಂಡಿದ್ದಾರೆ ಸಾಯಿ ಪಲ್ಲವಿ.






ಜುಲೈ 15ರಂದು ಕನ್ನಡವೂ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ಗಾರ್ಗಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾಯಿ ಪಲ್ಲವಿ ಓಡಾಡುತ್ತಿದ್ದಾರೆ. ಕನ್ನಡ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರಕ್ಕೆ ಸಂಭಂದಿಸಿದ ಸಂದರ್ಶನವೊಂದರಲ್ಲಿ ಅಪ್ಪುವನ್ನ ನೆನೆದಿದ್ದಾರೆ. “ನಾನು ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿದ್ದು ಕೇವಲ ಒಂದೇ ಬಾರಿ. ಅವಾರ್ಡ್ ಫಂಕ್ಷನ್ ಒಂದರಲ್ಲಿ ಈ ಅವಕಾಶ ಸಿಕ್ಕಿತ್ತು. ನಾನು ಆಗಷ್ಟೇ ‘ಪ್ರೇಮಂ’ ಸಿನಿಮಾ ಮಾಡಿದ್ದೆ. ಅಂದು ಆ ಕಾರ್ಯಕ್ರಮ ಮುಗಿಸಿ ಹೊರಡುವಾಗ




ಸ್ವತಃ ಪುನೀತ್ ಅವರೇ ನನ್ನನ್ನು ಕರೆದು ಮಾತನಾಡಿಸಿದ್ದರು. ಅವರು ದೇಶವಿಡೀ ಗುರುತು ಹಿಡಿಯುವ ಸ್ಟಾರ್ ನಟ, ನಾನಂದು ಕೇವಲ ಒಂದೇ ಸಿನಿಮಾ ಮಾಡಿದ್ದ ನಟಿ. ನನ್ನನ್ನು ಕರೆದು ಮಾತನಾಡಿಸುವ ಅವರ ಆ ಗುಣವೇ ಶ್ಲಾಘನೀಯ. ಅದು ಅವರ ಸರಳತೆ ಹಾಗು ಗರ್ವವಿಲ್ಲದ ಗುಣವನ್ನು ತೋರಿಸುತ್ತದೆ. ಅಂದು ಕೂಡ ಸಿನಿಮಾದ ಬಗ್ಗೆ, ನನ್ನ ನಟನೆಯ ಬಗ್ಗೆ ಹೊಗಳುತ್ತ ಅಭಿನಂದಿಸಿದ್ದರು. ಅವರ ಮಾತುಗಳು ನನ್ನ ಎಷ್ಟು ಪ್ರೇರೇಪಿಸಿತ್ತೆಂದರೆ, ಅವರನ್ನು ಮತ್ತೊಮ್ಮೆ ಭೇಟಿಯಾಗಿ ನೀವು ತುಂಬಿದ ಸ್ಫೂರ್ತಿಗೆ ನಾನು ಚಿರಋಣಿ ಎಂದು ಹೇಳಬೇಕು ಎಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ ಎಂಬ ಬೇಸರವಿದೆ” ಎಂದು ನುಡಿದ್ದಾರೆ ಸಾಯಿ ಪಲ್ಲವಿ.






