- March 21, 2022
‘ಕರ್ನಾಟಕದಲ್ಲಿ RRR ಸಿನಿಮಾವನ್ನು ಕನ್ನಡದಲ್ಲೇ ಹೆಚ್ಚು ಬಿಡುಗಡೆ ಮಾಡಿ’: ಶಿವಣ್ಣ


RRR, ಭಾರತದ ಅತ್ಯಂತ ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಲ್ಲಿ ಒಂದು. ‘ಬಾಹುಬಲಿ’ ರಾಜಮೌಳಿಯ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಸಿನಿಮಾ ಎಲ್ಲೆಲ್ಲೂ ಸಂಚಲನವನ್ನ ಈಗಾಗಲೇ ಮೂಡಿಸಿದೆ. ಬೆಳ್ಳಿತೆರೆಯನ್ನ ಬೆಳಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯಲು ಇನ್ನೇನು ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಇವೆ. ಇದೇ ಮಾರ್ಚ್ 25ರಂದು ಚಿತ್ರ ಪಂಚಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.


ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಮಾರ್ಚ್ 19ರಂದು ನಮ್ಮ ಕರುನಾಡಿನ ಚಿಕ್ಕಬಳ್ಳಾಪುರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕರ್ನಾಟದ ಗಣ್ಯರು ಸಿನಿಮಾಗೆ ಅತಿಥಿಯಾಗಿ ಆಗಮಿಸಿದ್ದರೆ, ಎರಡು ರಾಜ್ಯದ ಸಿನಿರಸಿಕರು ತಮ್ಮ ನೆಚ್ಚಿನ ನಟರು-ನಿರ್ದೇಶಕರನ್ನ ಕಣ್ತುಂಬಿಕೊಳ್ಳಲು ಸಾಗರದಂತೆ ಹರಿದು ಬಂದಿದ್ದಾರೆ. ಆಂಧ್ರ ಮತ್ತು ಕರ್ನಾಟಕದ ಗಡಿಯನ್ನು ಹಂಚಿಕೊಳ್ಳುವ ಚಿಕ್ಕಬಳ್ಳಾಪುರದಲ್ಲೇ ಬುದ್ದಿವಂತ ರಾಜಮೌಳಿಯವರು RRRನ ಬಹುಮುಖ್ಯದ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಕನ್ನಡ ನಾಡಿನ ದೊರೆಯಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾದರೆ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಗೌರವಯುತ ಉಪಸ್ಥಿತಿಯಿತ್ತು. ಚಿಕ್ಕಬಳ್ಳಾಪುರದ ಶಾಸಕರಾದಂತ ಸುಧಾಕರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಈ ವೇಳೆ ಮಾತನಾಡಿದ ಶಿವಣ್ಣ, ಸಿನಿಮಾತಂಡಕ್ಕೆ ಶುಭಹಾರೈಸಿ “ನಾನು ರಾಜಮೌಳಿಯವರ ದೊಡ್ಡ ಅಭಿಮಾನಿ. ಅವರ ಬಾಹುಬಲಿ ಚಿತ್ರ ಭಾರತದ ಸಿನಿಮಾಗಳ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿತ್ತು. ಸಿನಿಮಾ ನೋಡಿದ ತಕ್ಷಣವೇ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದೆ. ಎನ್ ಟಿ ಆರ್, ರಾಮಚರಣ್, ಚಿರಂಜೀವಿ ಇವರೆಲ್ಲರ ಸಿನಿಮಾವನ್ನು ನಾನು ಯಾವಾಗಲೂ ಥಿಯೇಟರ್ ನಲ್ಲೆ ನೋಡುತ್ತೇನೆ.” ಎಂದರು. ಇದರ ಜೊತೆಗೆ ಒಂದು ಮುಖ್ಯವಾದ ವಿಷಯವನ್ನು ಕೂಡ ಚಿತ್ರತಂಡದ ಮುಂದಿಟ್ಟಿದ್ದಾರೆ ಶಿವಣ್ಣ. ” ಕರ್ನಾಟಕದಲ್ಲಿ RRR ಸಿನಿಮಾವನ್ನು ಹೆಚ್ಚು ಕನ್ನಡ ಭಾಷೆಯ ಶೋಗಳಲ್ಲೇ ಬಿಡುಗಡೆಗೊಳಿಸಿ. ಪಾನ್ ಇಂಡಿಯಾ ಸಿನಿಮಾಗಳೆಲ್ಲ ನಮ್ಮಲ್ಲಿ ಸ್ವಂತ ಭಾಷೆಯಲ್ಲೇ ಬಿಡುಗಡೆಯಗುತ್ತವೆ” ಎಂದಿದ್ದಾರೆ. ಶಿವಣ್ಣ ಹೇಳಿದಂತೆ ಈ ಮುಂಚೆ ಬಂದಂತ ‘ಪುಷ್ಪ’, ‘ರಾಧೆ ಶ್ಯಾಮ್’ ಮುಂತಾದ ಪಾನ್ ಇಂಡಿಯಾ ಸಿನಿಮಾಗಳು ಕರ್ನಾಟಕದಲ್ಲೂ ಸಹ ಹೆಚ್ಚು ತೆಲುಗು ಷೋಗಳನ್ನು ಇಟ್ಟಿದ್ದರು.


RRRನ ಈ ಹಬ್ಬದಲ್ಲೂ ಸಹ ಅಪ್ಪುವನ್ನ ನೆರೆದಿದ್ದ ಗಣ್ಯರು ನೆನೆವಾಗ ಶಿವಣ್ಣ ಕಣ್ಣೀರಿತ್ತಿದ್ದಾರೆ. ” ಅವನಿಗೆ ಈ ರೀತಿ ದನಿಯಗುತ್ತೇನೆ ಎಂದೆಣಿಸಿರಲಿಲ್ಲ” ಎಂದು ಭಾವುಕರಾದರು ಶಿವಣ್ಣ.








