• March 26, 2022

RRR ಬಾಕ್ಸ್ ಆಫೀಸ್: ವಿಶ್ವದಾಖಲೆಗಳೆಲ್ಲ ಪುಡಿ ಪುಡಿ.

RRR ಬಾಕ್ಸ್ ಆಫೀಸ್: ವಿಶ್ವದಾಖಲೆಗಳೆಲ್ಲ ಪುಡಿ ಪುಡಿ.

ಭಾರತ ಚಿತ್ರರಂಗದ ‘ಬಾಹುಬಲಿ’, ಎಸ್. ಎಸ್. ರಾಜಮೌಳಿ ನಿರ್ದೇಶನದಲ್ಲಿ ಟೋಲಿವುಡ್ ನ ಹೆಸರಾಂತ ಸ್ಟಾರ್ ನಟರುಗಳಾದಂತ ಜೂನಿಯರ್ ಎನ್ಟಿಆರ್ ಹಾಗು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದ್ದ RRR ಮಾರ್ಚ್ 25ರಿಂದ ಬೆಳ್ಳಿ ತೆರೆಗಳ ಮೇಲೆ ಅಬ್ಬರಿಸುತ್ತಿದೆ. ಪ್ರಪಂಚದಾದ್ಯಂತ ಪಂಚಭಾಷೆಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಬಿಡುಗಡೆಯಗಿರೋ ಈ ‘ದೃಶ್ಯಕಾವ್ಯ’ವನ್ನು ಕಣ್ತುಂಬಿಕೊಳ್ಳಲು ಎಲ್ಲೆಡೆಯಿಂದ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದೆ. ಎಲ್ಲೆಲ್ಲೂ ಹೌಸ್ ಫುಲ್ ಆಗಿ ಮೆರೆಯುತ್ತಿರುವ ಈ ಚಿತ್ರದ ಕಲೆಕ್ಷನ್ ದಾಖಲೆಗಳನ್ನ ಬರೆಯುವುದು ಅಚ್ಚರಿಯ ವಿಷಯವೇನಲ್ಲ.

RRR ಚಿತ್ರ ಇತಿಹಾಸದ ದಾಖಲೆಗಳನ್ನೆಲ್ಲ ಮುರಿದು ಹಾಕಿ ಹೊಸ ಮೈಲಿಗಲ್ಲುಗಳನ್ನು ನೆಡುತ್ತಿದೆ. ಪ್ರಪಂಚದಾದ್ಯಂತ ಅಂದಾಜು 257 ಕೋಟಿಗಳನ್ನು ಮೊದಲ ದಿನವೇ ಗಳಿಸಿಕೊಂಡಿರೋ RRR, ಈ ಹಿಂದೆ ಮೊದಲ ದಿನ ಸುಮಾರು 220 ಕೋಟಿ ಗಳಿಸಿ ದಾಖಲೆ ಸೃಷ್ಟಿಸಿದ್ದ ‘ಬಾಹುಬಲಿ 2’ ಚಿತ್ರವನ್ನ ಹಿಂದಿಕ್ಕಿ, ಮೊದಲ ದಿನದಲ್ಲಿ ಅತಿಹೆಚ್ಚು ಕಲೆಕ್ಷನ್ ಪಡೆದ ಭಾರತದ ಸಿನಿಮಾಗಳ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೇರಿದೆ. ಈ ಮೂಲಕ ರಾಜಮೌಳಿಯ ಚಿತ್ರಗಳು ಹುಟ್ಟುಹಾಕೋ ದಾಖಲೆಗಳನ್ನ ಮುರಿಯಲು ರಾಜಮೌಳಿಯೇ ಹೊಸ ಸಿನಿಮಾವೊಂದನ್ನ ತರಬೇಕು ಎಂಬ ಮಾತು ಮತ್ತೊಮ್ಮೆ ಸತ್ಯವಾದಂತಾಯಿತು.

‘ರೌದ್ರ-ರಣ-ರುಧಿರ’ಗಳನ್ನ ತೆರೆಮೇಲೆ ತೋರಿಸೋ RRR ಮೊದಲ ದಿನ ಆಂಧ್ರ ಪ್ರದೇಶ ಹಾಗು ತೆಲಂಗಾಣ ರಾಜ್ಯಗಳಲ್ಲಿ ಸುಮಾರು 120.19 ಕೋಟಿ ರೂಪಾಯಿಗಳನ್ನು ಪಡೆದಿದೆ. ಕರ್ನಾಟಕದಲ್ಲಿ 16.48 ಕೋಟಿಯಾದರೆ, ತಮಿಳುನಾಡಿನಲ್ಲಿ 12.73 ಕೋಟಿ. ಇನ್ನು ಕೇರಳ ಪ್ರಾಂತದಲ್ಲಿ 4.36 ಕೋಟಿ ರೂಪಾಯಿಗಳನ್ನು ತುಂಬಿಕೊಳ್ಳುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಇದಲ್ಲದೆ ಭಾರತದ ಉಳಿದ ಪ್ರದೇಶಗಳಲ್ಲಿ ಸುಮಾರು 25.14 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಇನ್ನು ಸಮುದ್ರದಾಚೆಯ ಹೊರರಾಷ್ಟ್ರಗಳಲ್ಲಿ ಲೆಕ್ಕಕ್ಕೆ ಸಿಕ್ಕದ್ದು ಸುಮಾರು 78.25ಕೋಟಿ ರೂ ಗಳಿಕೆ. ಇಷ್ಟೊಂದು ಅಬ್ಬರದ ಗಳಿಕೆಯನ್ನ ಮೊದಲ ದಿನವೇ ಪಡೆಯುವಲ್ಲಿ ಯಶಸ್ವಿಯಾದ ಮೊದಲ ಚಿತ್ರ RRR ಎಂದು ಕೊಂಡಾಡುತ್ತ ಮನೋಬಲಾ ವಿಜಯಬಾಲನ್ ಅವರು ಗಳಿಕೆಗಳ ವರದಿಯನ್ನು ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ನಿರ್ದೇಶನದ RRR ಚಿತ್ರ ಜೂನಿಯರ್ ಎನ್ ಟಿ ಆರ್ ಹಾಗು ರಾಮ್ ಚರಣ್ ರಂತಹ ಎರಡು ಸ್ಟಾರ್ ನಟರನ್ನ ತನ್ನ ನಾಯಕರನ್ನಾಗಿ ಹೊಂದಿದೆ. ಇವರಿಬ್ಬರಷ್ಟೇ ಅಲ್ಲದೇ ಈ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಶ್ರೀಯ ಶರಣ್ ಮುಂತಾದ ದೊಡ್ಡ ಹೆಸರುಗಳ ತಾರಾಬಲ ಇದೆ. ಎಲ್ಲೆಡೆ ಬೃಹತ್ ಬಾಕ್ಸ್-ಆಫೀಸ್ ಗಳಿಕೆಯನ್ನ ಪಡೆಯುತ್ತಿರೋ RRR ಹೌಸ್ ಫುಲ್ ಬೋರ್ಡ್ ಗಳ ಜೊತೆಗೆ ಚಿತ್ರಮಂದಿರಗಳಲ್ಲಿ ಮೆರೆಯುತ್ತಿದೆ.