• March 24, 2022

‘ನಟಭಯಂಕರ’ನಿಗೆ ‘ರೋರಿಂಗ್ ಸ್ಟಾರ್’ ಸಾಥ್.

‘ನಟಭಯಂಕರ’ನಿಗೆ ‘ರೋರಿಂಗ್ ಸ್ಟಾರ್’ ಸಾಥ್.

ಬಿಗ್ ಬಾಸ್ ಕನ್ನಡದ ನಾಲ್ಕನೇ ಆವೃತ್ತಿಯ ವಿಜಯಶಾಲಿ, ‘ಒಳ್ಳೆ ಹುಡುಗ ಪ್ರಥಮ್’ ಎಂದೇ ಜನಪ್ರಿಯರಾಗಿರುವ ಪ್ರಥಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಚೊಚ್ಚಲ ಚಿತ್ರ ‘ನಟಭಯಂಕರ’. ಬಿಡುಗಡೆಗೆ ಸಿದ್ದವಾಗಿರೋ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ನಡೆಸಿಕೊಟ್ಟಿದ್ದಾರೆ. ಈ ವೇಳೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಥಮ್ ಸಿನಿಮಾದ ಬಿಡುಗಡೆ ದಿನಾಂಕವನ್ನ ಹೊರಹಾಕಿದ್ದಾರೆ.

“ಪ್ರಥಮ್ ಒಬ್ಬ ಕಾನ್ಫಿಡೆನ್ಸ್ ಇರುವ ಯುವಪ್ರತಿಭೆ. ಬಿಗ್ ಬಾಸ್ ಆರಂಭದಲ್ಲಿ ಇವರನ್ನು ನೋಡಿ ‘ಏನಪ್ಪಾ ಹಿಂಗ್ ಮಾತಾಡ್ತಾನೆ’ ಅಂದುಕೊಂಡಿದ್ದ ನಾನೇ ಕೊನೆಕೊನೆಗೆ ಇವರ ಅಭಿಮಾನಿಯಾದೆ. ಚಿತ್ರದ ಹಾಡುಗಳು ಚೆನ್ನಾಗಿವೆ, ಅದರಲ್ಲೂ ನಾನು ರಘು ದೀಕ್ಷಿತ್ ಅವರು ಇಷ್ಟಪಟ್ಟ ಹಾಡು, ಉಪೇಂದ್ರ ಅವರು ಹಾಡಿದ ಹಾಡು. ಸಿನಿಮಾ ಕೂಡ ಅದ್ಭುತವಾಗಿರಲಿದೆ ಎಂದು ನಂಬಿದ್ದೇನೆ” ಎಂದು ಹೇಳುವ ಮೂಲಕ ಆಡಿಯೋ ಬಿಡುಗಡೆ ಮಾಡಿದ ಶ್ರೀಮುರಳಿ ಚಿತ್ರತಂಡಕ್ಕೆ ಹಾರೈಸಿದರು. ಇವರ ಜೊತೆ, ಗೀತರಚನಕಾರ ವಿ. ನಾಗೇಂದ್ರ ಪ್ರಸಾದ್, ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಅರ್ಜುನ್ ಕುಮಾರ್ ಬಂಗಾರಪ್ಪ ಮೊದಲಾದ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು.

ಈ ವೇಳೆ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಥಮ್, ” ಇದು ನಮ್ಮ ಸಿನಿಮಾದ ಮೊದಲ ಸುದ್ದಿಗೋಷ್ಠಿ. ನನ್ನ ನಿರ್ದೇಶನದ ಮೊದಲ ಚಿತ್ರ ಕೂಡ. ಒಬ್ಬ ತುಂಬ ಅಹಂಕಾರಿಯಾದ ವ್ಯಕ್ತಿ, ಒಬ್ಬರಿಗೆ ಮಾತು ಕೊಟ್ಟರೆ ಹೇಗೆಲ್ಲ ಬದಲಾಗಬೇಕಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯ ಕಥಾವಸ್ತು. ಈಗ ಆಡಿಯೋ ರಿಲೀಸ್ ಆಗಿದೆ. ಸದ್ಯದಲ್ಲೇ ಟ್ರೈಲರ್ ಕೂಡ ಹೊರಬರುತ್ತದೆ. ಮೇ 13ರಂದು ಚಿತ್ರವನ್ನ ಬಿಡುಗಡೆಗೋಳಿಸೋ ಯೋಜನೆಯಿದೆ” ಎಂದರು. ನಿರ್ದೇಶನದ ಜೊತೆ ನಾಯಕರಾಗಿಯೂ ನಟಿಸಿರೋ ಪ್ರಥಮ್ ಗೆ ನಾಯಕಿಯಾಗಿ ಫ್ರಾನ್ಸ್ ನ ನಿವಾಸಿ ನಿಹಾರಿಕಾ ಬಣ್ಣ ಹಚ್ಚಿದ್ದಾರೆ.

ಉದಯ್. ಕೆ. ಮೆಹ್ತ ಅವರು ಬರೆದ ಕಥೆಗೆ, ಚಿತ್ರಕತೆ ಹಾಗು ಸಂಭಾಷಣೆಯನ್ನ ಬರೆದಿರೋ ಪ್ರಥಮ್, ನಿರ್ದೇಶನವನ್ನ ಕೂಡ ಮಾಡಿದ್ದಾರೆ. ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಸಾಯಿಕುಮಾರ್, ಸ್ಪರ್ಶ ರೇಖಾ, ಶೋಭರಾಜ್ ಮುಂತಾದ ದೊಡ್ಡ ದೊಡ್ಡ ಹೆಸರುಗಳು ಚಿತ್ರದ ತಾರಾಗಣದಲ್ಲಿದೆ. ಪ್ರದ್ಯೋತನ್ ಅವರ ಸಂಗೀತದ ನಾಲ್ಕು ಹಾಡುಗಳು ಚಿತ್ರದಲ್ಲಿದ್ದು, ಬಹಳ ಸಮಯದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರ ಕಂಠದಲ್ಲೂ ಒಂದು ಹಾಡು ಮೂಡಿಬಂದಿರುವುದು ಸಿನಿಮಾದ ವಿಶೇಷ. ಇಡೀ ಚಿತ್ರದುದ್ದಕ್ಕೂ ಧ್ರುವ ಸರ್ಜ ಅವರ ಧ್ವನಿ ಕೇಳಲಿದೆಯಂತೆ. ‘ಸ್ವಾರಸ್ಯ ಸಿನಿ ಕ್ರಿಯೇಷನ್ಸ್’ ನಿರ್ಮಾಣವಾಗಿರೋ ಈ ಚಿತ್ರ ಮೇ 13ರಂದು ತೆರೆಕಾಣೋ ಸಾಧ್ಯತೆಗಳಿವೆ.