• July 19, 2022

‘ರಾಘವೇಂದ್ರ ಸ್ಟೋರ್ಸ್’ ತೆರೆಮೇಲೆ ಸದ್ಯಕ್ಕಿಲ್ಲ

‘ರಾಘವೇಂದ್ರ ಸ್ಟೋರ್ಸ್’ ತೆರೆಮೇಲೆ ಸದ್ಯಕ್ಕಿಲ್ಲ

ಸದ್ಯ ಕನ್ನಡದ ಮುಂಚೂಣಿ ಸಿನಿಮಾ ನಿರ್ಮಾಣ ಸಂಸ್ಥೆ ಎಂದರೆ ಅದು ‘ಹೊಂಬಾಳೆ ಫಿಲಂಸ್’. ಕೆಜಿಎಫ್ ಸಿನಿಮಾದಿಂದ ತಮ್ಮ ಪ್ರಯತ್ನಕ್ಕೆ ಅತೀವ ಯಶಸ್ಸು ಪಡೆದ ಈ ಸಂಸ್ಥೆ ಸದ್ಯ ತಮ್ಮ ಕೈಯಲ್ಲಿ ಹಲವು ಸಿನಿಮಾಗಳನ್ನು ಇಟ್ಟುಕೊಂಡಿದೆ. ಅದರಲ್ಲಿ ಪಾನ್-ಇಂಡಿಯನ್ ಸಿನಿಮಾಗಳು ಮಾತ್ರವೇ ಅಲ್ಲದೇ ಏಕಭಾಷೆಯ ಸಿನಿಮಾಗಳು ಇವೆ. ಈ ಬಗೆಯ ಅಪ್ಪಟ ಕನ್ನಡ ಸಿನಿಮಾಗಳಲ್ಲಿ ಒಂದು ನವರಸ ನಾಯಕ ಜಗ್ಗೇಶ್ ಅವರ ಅಭಿನಯದ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’. ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಧಾರ ಮಾಡಿದ್ದ ಚಿತ್ರತಂಡ ಇದೀಗ ಆ ನಿರ್ಧಾರವನ್ನು ಬದಲಾಯಿಸಿದೆ.

ಕನ್ನಡದ ಹಿಟ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸೃಷ್ಟಿಯಾದ ಈ ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಜಗ್ಗೇಶ್ ಹಾಗು ಶ್ವೇತ ಶ್ರೀವಾಸ್ತವ ಅವರು ಜೊತೆಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತ ಚಿತ್ರಕ್ಕೆ ಜೀವ ತುಂಬಲಿದೆ. ಇದೇ ಆಗಸ್ಟ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಮೂಲಕ ಕನ್ನಡಿಗರಿಗೆ ತಿಳಿಸಿದ್ದ ಚಿತ್ರತಂಡ, ಸದ್ಯ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದೆ. ಆ ಕಾರಣಗಳಾಗಲಿ ಅಥವಾ ಹೊಸ ಬಿಡುಗಡೆ ದಿನಾಂಕದ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಈಗಾಗಲೇ ಬಿಡುಗಡೆಯಾಗಿದ್ದ ಸಿನಿಮಾದ ಟೀಸರ್ ಇದೊಂದು ಹಾಸ್ಯಬರಿತ ಮನರಂಜನ ಚಿತ್ರ ಎಂಬುದನ್ನು ಸಾರಿ ಹೇಳಿತ್ತು. ಇದೀಗ ಚಿತ್ರ ತಡವಾಗಿ ತೆರೆಕಾಣಲಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಕಾದು ನೋಡಬೇಕಿದೆ.