- June 28, 2022
ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ರವಿ ಬಸ್ರುರ್ ಸಂಗೀತ.


ನಮ್ಮ ಕನ್ನಡದ ಕರಾವಳಿಯ ಪ್ರತಿಭೆ ರವಿ ಬಸ್ರುರ್ ಅವರು ಇದೀಗ ಇಡೀ ಪ್ರಪಂಚವೇ ಮಾತನಾಡಿಕೊಳ್ಳುವಂತ ಸಂಗೀತ ನಿರ್ದೇಶಕರು. ‘ಕೆಜಿಎಫ್’ ಚಿತ್ರಗಳ ಯಶಸ್ಸಿನಲ್ಲಿ ಇವರು ಕೂಡ ಒಂದು ಅವಿನಾಭಾವ ಅಂಗ ಎಂದರೆ ತಪ್ಪಾಗದು. ಸದ್ಯ ಇವರ ಕೀರ್ತಿ ಬಾಲಿವುಡ್ ನಲ್ಲೂ ಅತಿ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಅವರ ‘ಅಂತಿಮ್’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿರುವ ಇವರು, ಇದೀಗ ಮತ್ತೊಮ್ಮೆ ‘ಭಾಯ್’ ಅಖಾಡವನ್ನು ಸೇರಲು ಸಜ್ಜಾಗಿದ್ದಾರೆ. ಅದು ಸಲ್ಮಾನ್ ಅವರ ಹೊಸ ಬಹುನಿರೀಕ್ಷಿತ ‘ಭಾಯ್ ಜಾನ್’ ಸಿನಿಮಾದಿಂದ.






ಸದ್ಯಕ್ಕೆ ತಾತ್ಕಾಲಿಕವಾಗಿ ‘ಭಾಯ್ ಜಾನ್’ ಅಥವಾ ‘ಕಬೀ ಈದ್ ಕಬೀ ದಿವಾಲಿ’ ಎಂದು ಕರೆಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಈ ಹಿಂದೆ ‘ಪುಷ್ಪ’ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಡಿ ಎಸ್ ಪಿ ಅಕಾ ದೇವಿ ಶ್ರೀ ಪ್ರಸಾದ್ ಅವರನ್ನು ಹಿನ್ನೆಲೆ ಸಂಗೀತ ನೀಡುವಂತೆ ಆಯ್ಕೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಡಿ ಎಸ್ ಪಿ ಅವರು ತಂಡದಿಂದ ಹೊರಗುಳಿದರು. ಇದೀಗ ಈ ಜಾಗಕ್ಕೆ ರವಿ ಬಸ್ರುರ್ ಅವರನ್ನು ನೇಮಿಸಿಕೊಂಡಿದ್ದಾರೆ ಸಲ್ಮಾನ್ ಖಾನ್. ಫರ್ಹಾದ್ ಸಮಜಿ ಅವರು ಚಿತ್ರವನ್ನು ನಿರ್ದೇಶಸುತ್ತಿದ್ದು, ಸ್ವತಃ ಸಲ್ಮಾನ್ ಖಾನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಹಾಗು ಒಂದು ಹಾಡನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ರವಿ ಬಸ್ರುರ್ ಅವರಿಗೆ ಒಪ್ಪಿಸಲಾಗಿದೆಯಂತೆ. ‘ಭಾಯ್ ಜಾನ್’ಗೆ ಸರಿಹೊಂದುವ ಥೀಮ್ ಸಾಂಗ್ ಒಂದನ್ನು ಈಗಾಗಲೇ ರವಿ ಬಸ್ರುರ್ ಅವರು ಸಿದ್ದಪಡಿಸಿದ್ದು, ಭಾವಯುಕ್ತ ಮೆಲೋಡಿ ಹಾಡಿನ ಮೇಲೆ ಕೆಲಸ ಮಾಡುತ್ತಿದ್ದಾರಂತೆ. ಸಲ್ಮಾನ್ ಖಾನ್ ಹಾಗು ರವಿ ಬಸ್ರುರ್ ಇಬ್ಬರೂ ಸಹ ಪರಸ್ಪರ ಅಪಾರ ಗೌರವ ಇಟ್ಟುಕೊಂಡಿದ್ದು, ಈ ಆಫರ್ ಬಂದ ತಕ್ಷಣವೇ ಎರಡು ಮಾತಿಲ್ಲದೆ ಸಮ್ಮತಿಸಿದ್ದಾರಂತೆ ರವಿ ಬಸ್ರುರ್ ಅವರು.




ಚಿತ್ರತಂಡದಲ್ಲಿ ಇತ್ತೀಚೆಗೆ ಹಲವು ಬದಲಾವಣೆಗಳು ಕಾಣಸಿಗುತ್ತಿವೆ. ಸಲ್ಮಾನ್ ಭಾಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಇವರು ಜೊತೆಗೆ ವೆಂಕಟೇಶ್ ದಗ್ಗುಬಾಟಿ, ಜಸ್ಸಿ ಗಿಲ್, ಪಾಲಕ್ ತಿವಾರಿ, ಹಾಗು ಬಿಗ್ ಬಾಸ್ 13 ಖ್ಯಾತಿಯ ಶೇಹ್ನಾಜ್ ಗಿಲ್ ಅವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಸಿನಿಮಾದ ತಾರಗಾನದಲ್ಲಿದ್ದ ಆಯುಷ್ ಶರ್ಮ ಅವರು ಇದೀಗ ಹೊರಗುಳಿದ್ದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಕನ್ನಡಿಗ ರವಿ ಬಸ್ರುರ್ ಅವರು ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು,ಈ ವರ್ಷದ ಡಿಸೆಂಬರ್ 30ಕ್ಕೆ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.






