• April 28, 2022

ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ.

ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ.

‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಾತಿದೆ. ಕಷ್ಟ ಪಟ್ಟರೇನೇ ಕೊನೆಗೆ ಯಶಸ್ಸು ಸಿಗೋದು. ಈ ಮಾತಿಗೆ ಸರಿಹೊಂದುವಂತ ಒಂದು ನಿದರ್ಶನ ನಮ್ಮ ರವಿ ಬಸ್ರುರು. ಸದ್ಯ ‘ಕೆಜಿಎಫ್’ ಎಂಬ ಯಶೋಗಾಥೆಯ ಒಂದು ಪ್ರಮುಖ ಅಂಗವಾಗಿರೋ ಇವರು, ಒಂದು ಕಾಲದಲ್ಲಿ ಒಂದೋತ್ತಿನ ಊಟಕ್ಕೂ ಒದ್ದಾಡಿದವರು. ಇಂದು ಯಶಸ್ಸಿನ ಸಾಗರದಲ್ಲಿ ತೇಲುತ್ತಿದ್ದರೆ, ಹಿಂದೊಂದು ದಿನ ಅವರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಬಹುದು.

ನಮ್ಮ ಕರಾವಳಿಯ ಕುಂದಾಪುರ ತಾಲೂಕಿನ ಬಸ್ರುರಿನ ಒಂದು ಬಡಕುಟುಂಬದಲ್ಲಿ ‘ಕಿರಣ್’ ಎಂಬ ಹೆಸರಿನಿಂದ ಜನಿಸಿದವರು ರವಿ ಬಸ್ರುರ್. ಚಿಕ್ಕವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಹೊತ್ತು, ತನ್ನದೇ ಆರ್ಕೆಸ್ಟ್ರಾ ಆರಂಭಿಸಿದ್ದರು. ತನ್ನ ಕಾಲಮೇಲೆ ನಿಲ್ಲಲು, ಹುಟ್ಟೂರನ್ನು ಬಿಟ್ಟು ಬೆಂಗಳೂರು ಸೇರಿದರು. ಬಿಡದಿಯ ಕಲಾಸಂಘವೊಂದರಲ್ಲಿ ಕೆತ್ತನೆ ಕೆಲಸದಲ್ಲಿ ಪರಿಣಿತಿ ಪಡೆದರು. ಮರ ಹಾಗು ಕಲ್ಲಿನ ಶಿಲ್ಪಗಳ ಕೆತ್ತನೆ ಕೆಲಸವನ್ನು ಮಾಡುತ್ತಾ, ದಿನದ ಗಳಿಕೆಯನ್ನು ಪಡೆದು, ರಾತ್ರಿ ಹೊತ್ತಿನಲ್ಲಿ ತನ್ನ ಸಂಗೀತಕ್ಕೆ ಅವಕಾಶ ಹುಡುಕಿ ಹೊರಡುತ್ತಿದ್ದರು.

ಹಲವಾರು ವ್ಯರ್ಥ ಪ್ರಯತ್ನಗಳ ನಂತರ ಬೆಂಗಳೂರು ತೊರೆದು ಮುಂಬೈ ಸೇರಿದರು. ಸಿನಿಮಾರಂಗಕ್ಕೆ ಹಾರಬೇಕೆಂದೆನಿಸುವವರಿಗೆ ಮುಂಬೈ ಒಂದು ಅವಾಕಾಶಗಳ ಮಹಾ ಸಮುದ್ರ. ಆದರೆ ಅಲ್ಲಿಯೂ ರವಿ ಅವರದ್ದು ಒಂದೇ ಕಥೆ. ಹಗಲು ಹೊತ್ತಿನಲ್ಲಿ ಕೆತ್ತನೆ ಕೆಲಸದಲ್ಲಿ ದುಡಿದು, ಇರುಳಿನಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದರು. ಅವರ ಕೈಯಲ್ಲಿ ಹುಟ್ಟಿದಂತ ಒಂದಿಷ್ಟು ಕೆತ್ತನೆಗಳು ಇಲ್ಲಿವೆ.

ಮುಂಬೈಯಲ್ಲಿ ಒಂದೋತ್ತಿನ ಊಟಕ್ಕೂ ಕಷ್ಟಪಾಡಬೇಕಾಗಿ ಬಂದು ರವಿ ಮರಳಿ ಹುಟ್ಟೂರನ್ನು ಸೇರಿದರು. ಊರಿನವರು ಆಡುತ್ತಿದ್ದ ಕೊಂಕುಮಾತುಗಳೆಲ್ಲ ಒಟ್ಟಾಗಿ ಅವರಲ್ಲಿದ್ದ ತಾನೇನಾದರೂ ಸಾಧಿಸಲೇ ಬೇಕು ಎಂಬ ಹಠ ಹೆಚ್ಚಾಗುತ್ತಾ ಹೋಗಿತ್ತು. ತಮ್ಮ RJ ಸ್ನೇಹಿತನೊಬ್ಬನಿಂದ 92.7 ಬಿಗ್ FM ನಲ್ಲಿ ಸಂಗೀತ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಎಲ್ಲರ ಮೆಚ್ಚುಗೆ ಪಡೆದ ರವಿ, ಕನ್ನಡ ಚಿತ್ರರಂಗದಲ್ಲಿನ ಹೆಸರಾಂತ ಸಂಗೀತ ನಿರ್ದೇಶಕರ ಅಡಿಯಲ್ಲಿ ಪ್ರೋಗ್ರಾಮರ್ ಆಗಿ ಸೇರಿಕೊಂಡರು. ಕೆಲಸದ ಜೊತೆಗೆ ಅನುಭವವನ್ನು ತನ್ನದಾಗಿಸಿಕೊಳ್ಳುತ್ತಾ ಚಿತ್ರರಂಗದ ಬಗೆಗಿನ ತನ್ನ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದರು ರವಿ. ಈ ಹಿಂದೆಯೇ ಹಲವಾರು ಆಲ್ಬಮ್ ಸಾಂಗ್ ಗಳನ್ನು ಪ್ರಯತ್ನಿಸಿದ್ದ ರವಿಗೆ, ಹೇಳಿಕೊಳ್ಳುವಷ್ಟು ಯಾವುದು ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ರವಿಯ ನಿಪುಣತೆ ಅವರನ್ನ ಸಣ್ಣ ಪುಟ್ಟ ಸಿನಿಮಾಗಳೆಡೆಗೆ ಸೆಳೆಯುವಂತೆ ಮಾಡಿತ್ತು.

ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದರು, ರವಿ ಬಸ್ರುರ್ ಅವರನ್ನ ನಾಡಿಗೆ ಪರಿಚಯವಾಗುವಂತೆ ಮಾಡಿದ್ದು 2014ರಲ್ಲಿ ಮೂಡಿಬಂದ ಪ್ರಶಾಂತ್ ನೀಲ್ ಅವರ ‘ಉಗ್ರಂ’. ಹೆಸರು ಮಾತ್ರವಲ್ಲದೆ ಪ್ರಶಸ್ತಿಗಳು ಸಹ ಇವರನ್ನ ಹುಡುಕಿಕೊಂಡು ಬರುವಂತೆ ಮಾಡಿತ್ತು ಈ ಚಿತ್ರ. ನಂತರ ಓಡುತ್ತಲೇ ಹೊರಟ ರವಿಯವರ ಸಂಗೀತ ಬಂಡಿ, ಹಿಂತಿರುಗಿ ನೋಡಲೇ ಇಲ್ಲ. ಕುಂದಗನ್ನಡದ ‘ಗರ್ ಗರ್ ಮಂಡ್ಲ’, ‘ಬಿಲಿಂಡರ್’ ಚಿತ್ರಗಳನ್ನ ನಿರ್ದೇಶಿಸಿ, ಸಂಗೀತ ಕೂಡ ನೀಡಿದ್ದರು. ತುಳು ಸಿನಿಮಾಗಳಾದ, ‘ಎಕ್ಕ ಸಕ’, ‘ಜಸ್ಟ್ ಮದುವೆಲ್ಲಿ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಕನ್ನಡ ಚಿತ್ರರಂಗದಲ್ಲಿ ಉಗ್ರಂ ನಿಂದ ಆರಂಭಿಸಿ, ‘ಕರ್ವ’, ‘ಅಂಜನೀಪುತ್ರ’, ‘100’,’ಮದಗಜ’ ಮಾತ್ರವಲ್ಲದೆ ಈಗ ಎಲ್ಲೆಡೆ ಸದ್ದು ಮಾಡುತ್ತಿರೋ ‘ಕೆಜಿಎಫ್ ಚಾಪ್ಟರ್ 1’ ಹಾಗು ‘ಕೆಜಿಎಫ್ ಚಾಪ್ಟರ್ 2’ ಚಿತ್ರಗಳಿಗೂ ಇವರದ್ದೇ ಸಂಗೀತ. ಇದೆಲ್ಲದರ ನಡುವೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ ರವಿ ಬಸ್ರುರ್. ಮುಂದೆ ಬರಲಿರುವಂತ ಬಹು ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಾದ, ‘ಸಲಾರ್’ ಹಾಗು ‘ಕಬ್ಜ’ ಚಿತ್ರದಲ್ಲೂ ಸಹ ಇವರ ಸಂಗೀತವೇ ಸದ್ದು ಮಾಡಲಿದೆ.

ಸದ್ಯ ಭಾರತದಾದ್ಯಂತ ಎಲ್ಲ ಕನ್ನಡ, ತಮಿಳು, ತೆಲುಗು,ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲೂ ಬಹುಬೇಡಿಕೆಯಲ್ಲಿರುವ ಇವರು ಒಮ್ಮೆ ಕಷ್ಟಗಳ ಸಾಲಿನಲ್ಲೇ ಮುಳುಗೆದ್ದವರು. ಇಂದು ಜನಮನ ಕೆಡಿಸುವಂತ ಸಂಗೀತವನ್ನ ಎಲ್ಲೆಡೆ ನೀಡುತ್ತಿರುವವರು, ಹಿಂದೊಂದು ದಿನ ಅದ್ಭುತ ಶಿಲ್ಪಗಳನ್ನ ಕೆತ್ತಿ, ತನ್ನ ದಿನದೂಡುತ್ತಿದ್ದವರು. ಪರಿಶ್ರಮದ ಕೊನೆ ಫಲಿತಾಂಶ ಯಶಸ್ಸಿನ ಸಡಗರ ಎಂಬ ಮಾತಿಗೆ ಒಂದೊಳ್ಳೆ ಉದಾಹರಣೆ ನಮ್ಮ ರವಿ ಬಸ್ರುರು.